ಹಾಂಗ್‌ಝೌ : ಭಾರತ ಮಹಿಳಾ ಕ್ರಿಕೆಟ್ ತಂಡ ಏಷ್ಯನ್ ಗೇಮ್ಸ್ 2023 ಕ್ರೀಡಾಕೂಟದಲ್ಲಿ ಸ್ವರ್ಣ ಪದಕ ಗೆದ್ದಿದೆ.
ಚೀನಾದ ಹಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ 19 ರನ್‌ಗಳಿಂದ ಶ್ರೀಲಂಕಾ ತಂಡವನ್ನು ಮಣಿಸಿ ಸ್ವರ್ಣ ಪದಕಕ್ಕೆ ಕೊರಳೊಡ್ಡಿತು.
ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡ ಬೌಲಿಂಗ್ ಸ್ನೇಹಿ ಪಿಚ್‌ನಲ್ಲಿ ಬ್ಯಾಟ್ ಮಾಡಲು ಬಹಳಾ ಕಷ್ಟ ಪಟ್ಟಿತು. ಸ್ಟಾರ್ ಓಪನರ್ ಶಫಾಲಿ ವರ್ಮಾ ಮತ್ತೊಮ್ಮೆ ಕೈಕೊಟ್ಟರು. ಆದರೂ ಅನುಭವಿಗಳಾದ ಸ್ಮೃತಿ ಮಂಧಾನಾ (46) ಮತ್ತು ಜೆಮಿಮಾ ರೊಡ್ರಿಗಸ್ (42) ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಈ ಜೋಡಿ 2ನೇ ವಿಕೆಟ್‌ಗೆ 73 ರನ್‌ಗಳ ಜೊತೆಯಾಟವಾಡಿತು.
ಆದರೆ ಇನಿಂಗ್ಸ್ ಮಧ್ಯದಲ್ಲಿ ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವಿಭಾಗ ಕೈಕೊಟ್ಟಿತು. ನಾಯಕಿ ಹರ್ಮನ್‌ಪ್ರೀತ್ ಕೌರ್ (2) ವಿಕೆಟ್ ಕೈಚೆಲ್ಲಿದರು. ರಿಚಾ ಘೋಶ್ (9) ಮತ್ತು ಪೂಜಾ ವಸ್ತ್ರಕಾರ್ (2) ಸ್ಕೋರ್ ಮಾಡಲು ವಿಫಲರಾದರು. ಭಾರತ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 116 ರನ್‌ಗಳ ಸಾಧಾರಣ ಮೊತ್ತ ಮಾತ್ರವೇ ಕಲೆಹಾಕಿತು.
ಶ್ರೀಲಂಕಾ ತಂಡದ ಪರ ಪ್ರಭೋದಿನಿ, ಸುಗಂದಿಕಾ ಕುಮಾರಿ, ಮತ್ತು ರಣವೀರಾ ತಲಾ 2 ವಿಕೆಟ್ ಪಡೆದರು.
ಗೆಲುವಿಗೆ 117 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ್ದ ಶ್ರೀಲಂಕಾ ತಂಡ 14ಕ್ಕೆ 3 ವಿಕೆಟ್ ಕಳೆದುಕೊಂಡು ಆಘಾತಕ್ಕೀಡಾಯಿತು. ಸ್ಟಾರ್ ಓಪನರ್ ಚಾಮರಿ ಅಟಪಟ್ಟು (12) ಬೇಗ ನಿರ್ಗಮಿಸಿದರು. ಇನಿಂಗ್ಸ್ ಮಧ್ಯದಲ್ಲಿ ಹಾಸಿನಿ ಪೆರೆರಾ (25) ಮತ್ತು ನೀಲಾಕ್ಷಿ ಡಿಸಿಲ್ವಾ (23) ಕೊಂಚ ಹೋರಾಟ ನಡೆಸಿದರು. ಆದರೆ ಭಾರತೀಯ ಬೌಲರ್ ಮುಂದೆ ಮಂಕಾದರು.
ಭಾರತದ ಪರ ವೇಗಿ ಟಿಟಾಸ್ ಸಾಧು 6ಕ್ಕೆ 3 ವಿಕೆಟ್ ಪಡೆದು ಲಂಕಾ ತಂಡವನ್ನು ಕಾಡಿದರು. ಅವರಿಗೆ ರಾಜೇಶ್ವರಿ ಗಾಯಕ್ವಾಡ್ (20ಕ್ಕೆ 2) ಸಾಥ್ ನೀಡಿದರು.
ಈ ಗೆಲುವಿನೊಂದಿಗೆ ಭಾರತೀಯ ವನಿತೆಯರು ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕಕ್ಕೆ ಕೊರೊಳೊಡ್ಡಿದ್ದಾರೆ. ಅತ್ತ ರನ್ನರ್ ಅಪ್ ಆಗಿ ಶ್ರೀಲಂಕಾ ತಂಡ ಬೆಳ್ಳಿ ಪದಕ ಗೆದ್ದರೆ, 3ನೇ ಸ್ಥಾನ ಪಡೆದಿರುವ ಬಾಂಗ್ಲಾದೇಶ್ ಮಹಿಳಾ ತಂಡ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದೆ.
ಇದು 2023ರ ಸಾಲಿನ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಸಿಕ್ಕ ಎರಡನೇ ಚಿನ್ನದ ಪದಕವಾಗಿದೆ.





