ಹ್ಯಾಂಗ್‌ಝೌ : ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಅದ್ಭುತ ಪ್ರದರ್ಶನ ಭಾನುವಾರವೂ ಮುಂದುವರಿದಿದೆ. ಭಾನುವಾರ ನಡೆದ 50 ಮೀಟರ್ ಟ್ರ್ಯಾಪ್ ಶೂಟಿಂಗ್ ಪುರುಷರ ವಿಭಾಗದಲ್ಲಿ ಭಾರತದ ತಂಡ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ.
ಭಾರತದ ಪೃಥ್ವಿರಾಜ್ ತೊಂಡೈಮಾನ್, ಕಿನಾನ್ ಚೆನೈ ಮತ್ತು ಜೋರವರ್ ಸಿಂಗ್ ಸಂಧು ಅವರ ತಂಡ ಭಾರತಕ್ಕೆ ಚಿನ್ನದ ಪದಕವನ್ನು ಗೆದ್ದುಕೊಟ್ಟಿದೆ.
ಅಂತಿಮ ಸುತ್ತಿನಲ್ಲಿ ಕಿನಾನ್ ಚೆನೈ ಪರಿಪೂರ್ಣ 25ಕ್ಕೆ 25 ಅಂಕ ಗಳಿಸಿದರೆ, ಅಂತಿಮವಾಗಿ ಈ ಮೂವರು 361 ಅಂಕ ಕಲೆಹಾಕಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಈ ವಿಭಾಗದಲ್ಲಿ ಭಾರತ ಚಿನ್ನ ಗೆದ್ದರೆ, ಕುವೈತ್ ಮತ್ತು ಚೀನಾ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕವನ್ನು ಗೆದ್ದವು. ಇದುವರೆಗೆ ನಡೆದಿರುವ ಸ್ಪರ್ಧೆಯಲ್ಲಿ ಭಾರತ ಕೇವಲ ಶೂಟಿಂಗ್‌ನಲ್ಲಿಯೇ 7 ಚಿನ್ನದ ಪದಕ ಗೆದ್ದು ದಾಖಲೆ ಬರೆದಿದ್ದಾರೆ.
ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಕೇವಲ ಶೂಟಿಂಗ್ ವಿಭಾಗ ಒಂದರಲ್ಲೇ 7 ಚಿನ್ನ, 9 ಬೆಳ್ಳಿ, 5 ಕಂಚು ಸೇರಿದಂತೆ ಒಟ್ಟು 21 ಪದಕಗಳು ಬಂದಿವೆ. ಇನ್ನಷ್ಟು ಬರುವ ನಿರೀಕ್ಷೆಗಳಿವೆ.
ಇದಕ್ಕೂ ಮೊದಲು ಜಕಾರ್ತಾದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಅತಿ ಹೆಚ್ಚು 16 ಚಿನ್ನ ಗೆದ್ದಿತ್ತು. ಈ ಬಾರಿ ಆ ದಾಖಲೆ ಮುರಿಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.





