ಹ್ಯಾಂಗ್‌ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತ ಕ್ರಿಕೆಟ್ ತಂಡ ಚೊಚ್ಚಲ ಚಿನ್ನದ ಪದಕ ಗೆದ್ದಿದೆ. ಅಫ್ಘಾನಿಸ್ಥಾನದ ವಿರುದ್ಧ ಫೈನಲ್ಸ್ ಪಂದ್ಯ ಮಳೆಯ ಕಾರಣ ರದ್ದಾಗಿದ್ದು, ಹೆಚ್ಚಿನ ಶ್ರೇಣಿಯಲ್ಲಿ ಸ್ಥಾನ ಪಡೆದಿದ್ದರಿಂದ ಋತುರಾಜ್ ಗಾಯಕ್ವಾಡ್ ನೇತೃತ್ವದ ತಂಡವನ್ನು ವಿಜೇತ ತಂಡ ಎಂದು ಘೋಷಿಸಲಾಗಿದೆ.
ಹ್ಯಾಂಗ್‌ಝೌನ ಪಿಂಗ್‌ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರುತುರಾಜ್ ಗಾಯಕ್ವಾಡ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ 18.2 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 112 ರನ್ ಕಲೆಹಾಕಿದಾಗ ಮಳೆ ಬರಲಾರಂಭಿಸಿತು.
ಧಾರಾಕಾರ ಸುರಿದ ಮಳೆಯಿಂದ ಮೈದಾನವು ಸಂಪೂರ್ಣ ಒದ್ದೆಯಾಗಿದ್ದು, ಹೀಗಾಗಿ ಪಂದ್ಯವನ್ನು ರದ್ದುಗೊಳಿಸಲು ಅಂಪೈರ್ಗಳು ನಿರ್ಧರಿಸಿದರು. ಅದರಂತೆ ಅಂತಿಮ ಹಣಾಹಣಿಯು ಮಳೆಗೆ ಅಹುತಿಯಾಯಿತು. ಇದಾಗ್ಯೂ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದ ಟೀಮ್ ಇಂಡಿಯಾವನ್ನು ವಿಜಯಿ ಎಂದು ಘೋಷಿಸಲಾಯಿತು.
ಈ ಮೂಲಕ ಏಷ್ಯನ್ ಗೇಮ್ಸ್ ಕ್ರಿಕೆಟ್ನಲ್ಲಿ ಭಾರತ ತಂಡವು ಸ್ವರ್ಣ ಪದಕವನ್ನು ಗೆದ್ದುಕೊಂಡಿದೆ. ಇನ್ನು ರನ್ನರ್ ಅಪ್ ತಂಡ ಅಫ್ಘಾನಿಸ್ತಾನ್ ತಂಡವು ಬೆಳ್ಳಿ ಪದಕಕ್ಕೆ ಕೊರೊಳೊಡ್ಡಿದರೆ, ಬಾಂಗ್ಲಾದೇಶ್ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದೆ.





