ಹಾಂಗ್‌ಝೌ : ಭಾರತದ ಪ್ರೀತಿ ಪವಾರ್ ಅವರೂ ಬಾಕ್ಸಿಂಗ್‌ನಲ್ಲಿ ಪ್ಯಾರಿಸ್ ಒಲಿಂಪಿಕ್ಸ್‌ಗೆ ಕೋಟಾ ಗಿಟ್ಟಿಸಿದರು. ಅವರೊಂದಿಗೆ, ಲವಿನಾ ಬೋರ್ಗೊಹೈನ್ ಕೂಡ ಶನಿವಾರ ಸೆಮಿಫೈನಲ್ ತಲುಪುವ ಮೂಲಕ ಏಷ್ಯನ್ ಕ್ರೀಡಾಕೂಟದ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಪದಕಗಳನ್ನು ಖಚಿಪಡಿಸಿಕೊಂಡರು.
19 ವರ್ಷದ ಪ್ರೀತಿ 54 ಕೆ.ಜಿ. ವಿಭಾಗದಲ್ಲಿ ಆತ್ಮವಿಶ್ವಾಸದಿಂದ ಕಣಕ್ಕಿಳಿದು ಏಷ್ಯನ್ ಚಾಂಪಿಯನ್ ಆಗಿರುವ ಕಜಕಸ್ತಾನದ ಮೈನಾ ಶೇಖೆರ್‌ಬೆಕೋವಾ ಅವರನ್ನು ಉತ್ತಮ ಹಣಾಹಣಿಯ ಹೋರಾಟದಲ್ಲಿ 4-1 ರಿಂದ ಸೋಲಿಸಿದರು. ಶೇಖೆರ್‌ಬೆಕೋವಾ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಮೂರು ಬಾರಿ ಪದಕ ಗೆದ್ದುಕೊಂಡಿದ್ದಾರೆ.
75 ಕೆ.ಜಿ. ವಿಭಾಗದ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ, ಟೋಕಿಯೊ ಒಲಿಂಪಿಕ್ಸ್‌ನ ಕಂಚಿನ ಪದಕ ವಿಜೇತೆ ಲವಿನಾ ನಿರೀಕ್ಷೆಯಂತೆ ದಕ್ಷಿಣ ಕೊರಿಯದ ಸಿಯೊಂಗ್ ಸುಯೋನ್ ಅವರನ್ನು 5-0 ಯಿಂದ ರೆಫ್ರಿಗಳ ಒಮ್ಮತದ ನಿರ್ಧಾರದಲ್ಲಿ ಜಯಗಳಿಸಿದರು. ಈ ವಿಭಾಗದಲ್ಲಿ ಫೈನಲ್ ತಲುಪಿದರೆ ಲವಿನಾ ಅವರೂ ಒಲಿಂಪಿಕ್ ಕೋಟಾಕ್ಕೆ ಅರ್ಹರಾಗುತ್ತಾರೆ.
ನಿಖತ್ ಝರೀನ್ ಅವರು ಶುಕ್ರವಾರ ಈ ಕೂಟದಲ್ಲಿ ಒಲಿಂಪಿಕ್ ಕೋಟಾದಡಿ ಅರ್ಹತೆ ಪಡೆದ ಭಾರತದ ಮೊದಲ ಬಾಕ್ಸರ್ ಎನಿಸಿದ್ದರು.
ಮಹಿಳೆಯರ ವಿಭಾಗದ ಸ್ಪರ್ಧೆಗಳಲ್ಲಿ 50 ಕೆ.ಜಿ., 54 ಕೆ.ಜಿ, 57 ಕೆ.ಜಿ. ಮತ್ತು 60 ಕೆ.ಜಿ. ವಿಭಾಗಗಳಲ್ಲಿ ಸೆಮಿಫೈನಲ್ ತಲುಪಿದವರು ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುತ್ತಾರೆ. 66 ಕೆ.ಜಿ. 75 ಕೆ.ಜಿ. ವಿಭಾಗದಲ್ಲಿ ಫೈನಲ್ ತಲುಪಿದವರು ಮಾತ್ರ ಅರ್ಹತೆ ಪಡೆಯುತ್ತಾರೆ.
ಪುರುಷರ ವಿಭಾಗದ ಏಳು ತೂಕ ವಿಭಾಗಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಪದಕ ಗೆದ್ದ ಬಾಕ್ಸಿಂಗ್ ಪಟುಗಳು ಒಲಿಂಪಿಕ್ಸ್ ಕೋಟಾದಡಿ ಆಯ್ಕೆಯಾಗುತ್ತಾರೆ.