ಡಂಬುಲ್ಲಾ: ಭಾರತ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಹಾಗೂ ರಿಚಾ ಘೋಷ್ ಅವರ ಭರ್ಜರಿ ಬ್ಯಾಟಿಂಗ್ ಸಹಾಯದಿಂದ ಏಷ್ಯಾಕಪ್ 2024ರ ಐದನೇ ಲೀಗ್ ಪಂದ್ಯದಲ್ಲಿ ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್) ವಿರುದ್ಧ ಟೀಂ ಇಂಡಿಯಾ 78 ರನ್‌ಗಳ ಅಂತರದಿಂದ ಗೆದ್ದು ಬೀಗಿದೆ. ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸುವ ಮೂಲಕ ಟೀಂ ಇಂಡಿಯಾ ಸೆಮಿಸ್‌ಗೆ ಲಗ್ಗೆಯಟ್ಟಿದೆ.
ಇಲ್ಲಿನ ರಂಗಿರಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಷ್ಯಾಕಪ್ 2024ರ ಟೂರ್ನಿಯ ಐದನೇ ಪಂದ್ಯದಲ್ಲಿ ಟಾಸ್ ಸೋತ ಭಾರತ ಮಹಿಳಾ ತಂಡ ಮೊದಲು ಬ್ಯಾಟ್ ಮಾಡಿತು. ಅದರಂತೆ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 201 ರನ್ ಗಳಿಸಿ 202ರನ್ ಗಳ ಬೃಹತ್ ಮೊತ್ತದ ಸವಾಲೊಡ್ಡಿತು. ಈ ಮೊತ್ತ ಬೆನ್ನತ್ತಿದ ಯುಎಇ ಮಹಿಳಾ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 123 ರನ್ ಬಾರಿಸಿ 78 ರನ್‌ಗಳ ಅಂತರದಿಂದ ಸೋಲೊಪ್ಪಿಕೊಂಡಿತು.
ಭಾರತ ಇನ್ನಿಂಗ್ಸ್: ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಪರವಾಗಿ ಆರಂಭಿಕರಾಗಿ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂದನಾ ಕಣಕ್ಕಿಳಿದರು. ಶಫಾಲಿ 37(18) ರನ್ ಗಳಿಸಿ ಔಟಾದರೇ, ಸ್ಮೃತಿ ಕೇವಲ 13(9)ರನ್ ಗಳಿಸಿ ನಿರ್ಗಮಿಸಿರು. ಬಳಿಕ ಬಂದ ಹೇಮಲತಾ 2(4)ರನ್ ಗಳಿಗೆ ಸುಸ್ತಾದರೇ, ರೋಡ್ರಿಗಸ್ 14(13)ರನ್ ಗಳಿಸಿ ಪೆವಿಲಿಯನ್ ಸೇರಿದರು.
ನಂತರ ಒಂದಾದ ನಾಯಕಿ ಹರ್ಮನ್‌ಪ್ರೀತ್ ಹಾಗೂ ರಿಚಾ ಗೋಷ್ ಜೋಡಿ ಯುಎಇ ಬೌಲರ್‌ಗಳನ್ನು ಕಾಡಿದರು. ನಾಯಕಿ ಕೌರ್ 47 ಎಸೆತಗಳಲ್ಲಿ 7ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 66 ರನ್ ಬಾರಿಸಿದರೆ, ರಿಚಾ ಕೇವಲ 29 ಎಸೆತಗಳಲ್ಲಿ 12 ಬೌಂಡರಿ ಮತ್ತು 1 ಸಿಕ್ಸರ್ ಸೇರಿ ಔಟಾಗದೇ ಬರೋಬ್ಬರಿ 64 ರನ್ ಚಚ್ಚಿದರು. ಪೂಜಾ ಯಾವುದೇ ರನ್ ಗಳಿಸದೇ ಔಟಾಗದೇ ಉಳಿದರು.
ಯುಎಇ ಕವಿಶಾ ಎಗ್ಗೋಡ್ಗೆ ಎರಡು ವಿಕೆಟ್, ಹೀನಾ ಹೊತ್ಚಂದಾನಿ ಹಾಗೂ ಸಮೈರಾ ತಲಾ ಒಂದೊಂದು ವಿಕೆಟ್ ಕಬಳಿಸಿದರು.
ಯುಎಇ ಇನ್ನಿಂಗ್ಸ್: ಈ ಬೃಹತ್ ಮೊತ್ತ ಬೆನ್ನತ್ತಿದ ಯುಎಇಗೆ ನಿರೀಕ್ಷಿತಾ ಆರಂಭ ಕಂಡುಬರಲಿಲ್ಲ. ಆರಂಭಿಕ ಆಟಗಾರ್ತಿ ತೀರ್ಥಾ ಸತೀಶ್ ಕೇವಲ 4(12)ರನ್ ಗಳಿಸಿ ಔಟಾದರು. ನಾಯಕಿ ರೋಹಿತ್ ಓಜಾ 38(36) ರನ್, ರಿನಿತಾ ರಜಿತ್ 7(3)ರನ್, ಸಮೈರಾ 5(8)ರನ್, ಖುಷಿ ಶರ್ಮಾ 10(13)ರನ್, ಹೀನಾ ಹೊತ್ಚಂದಾನಿ 8(9)ರನ್, ರಿತಿಕಾ 6(7)ರನ್ ಗಳಿಸಿದರು.
ಕವಿಶಾ 32 ಎಸೆತ 3 ಬೌಂಡರಿ ಹಾಗು 1 ಸಿಕ್ಸರ್ ಸಹಿತ ಔಟಾಗದೇ 40 ರನ್ ಬಾರಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು. ಇನ್ನು ಕವಿಶಾ ಗಳಿಸಿದ್ದೇ ತಂಡದ ಪರವಾಗಿ ದಾಖಲಾದ ವೈಯಕ್ತಿಕ ಗರಿಷ್ಠ ಮೊತ್ತವಾಗಿತ್ತು.
ಟೀಂ ಇಂಡಿಯಾ ಪರವಾಗಿ ದೀಪ್ತಿ ಶರ್ಮಾ 2, ರೇಣುಕಾ ಠಾಕೂರ್, ತನುಜಾ, ಪೂಜಾ ಹಾಗೂ ರಾಧಾ ಯಾದವ್ ತಲಾ ಒಂದೊಂದು ವಿಕೆಟ್ ಕಬಳಿಸಿ ಗಮನ ಸೆಳೆದರು.
ಪಂದ್ಯ ಶ್ರೇಷ್ಠ: ರಿಚಾ ಘೋಷ್