Mysore
19
overcast clouds
Light
Dark

ಡೆವಿಡ್‌ ವಾರ್ನರ್‌ ಮುಡಿಗೆ ಮತ್ತೊಂದು ದಾಖಲೆ

ಮೆಲ್ಬೋರ್ನ್ : ಇಲ್ಲಿ ನಡೆಯುತ್ತಿರುವ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದಲ್ಲಿ ಆಸೀಸ್‌ ಎಡಗೈ ದಾಂಡಿಗ ಡೆವಿಡ್‌ ವಾರ್ನರ್‌ ವಿಶೇಷ ದಾಖಲೆ ನಿರ್ಮಿಸಿದ್ದಾರೆ.

ಪಾಕ್‌ ವಿರುದ್ಧದ ಪಂದ್ಯದಲ್ಲಿ 38 ರನ್‌ ಗಳಿಸುವ ಮೂಲಕ ಆಸ್ಟ್ರೇಲಿಯಾ ಪರವಾಗಿ ಎಲ್ಲಾ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್‌ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ವಾರ್ನರ್‌ ಎರಡನೇ ಸ್ಥಾನ ಪಡೆದು ದಾಖಲೆ ಬರೆದಿದ್ದಾರೆ.

ಟಾಸ್ ಸೋತು ಬ್ಯಾಟಿಂಗ್‌ ಮಾಡಿದ ಆಸೀಸ್‌ ತಂಡಕ್ಕೆ ಆರಂಭಿಕರಾದ ಡೇವಿಡ್ ವಾರ್ನರ್ ಹಾಗೂ ಉಸ್ಮಾನ್ ಖ್ವಾಜಾ ಭರ್ಜರಿ ಒಪನಿಂಗ್‌ ಒದಗಿಸಿದರು. ಮೊದಲ ವಿಕೆಟ್​ಗೆ 90 ರನ್​ಗಳ ಜೊತೆಯಾಟವಾಡಿದ ಬಳಿಕ ಡೇವಿಡ್ ವಾರ್ನರ್ (38) ಸಲ್ಮಾನ್ ಅಲಿ ಅಘಾ ಎಸೆತದಲ್ಲಿ ಸ್ಲಿಪ್​ನಲ್ಲಿ ಕ್ಯಾಚ್ ನೀಡಿದರು. ಈ 38 ರನ್​ಗಳ ಇನಿಂಗ್ಸ್​ನೊಂದಿಗೆ ವಾರ್ನರ್ ಆಸ್ಟ್ರೇಲಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ 2ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಆಸೀಸ್‌ ಮಾಜಿ ನಾಯಕ ಸ್ಟೀವ್ ವಾ 548 ಇನಿಂಗ್ಸ್​ಗಳಿಂದ 18496 ರನ್​ ಕಲೆಹಾಕಿದ್ದರು. ಇದೀಗ ಈ ದಾಖಲೆಯನ್ನು ಮುರಿದಿರುವ ಡೇವಿಡ್ ವಾರ್ನರ್ 460 ಇನಿಂಗ್ಸ್‌ನಲ್ಲಿ ಇದುವರೆಗೆ 18502 ರನ್ ಕಲೆಹಾಕಿದ್ದಾರೆ. ಆ ಮೂಲಕ ಆಸೀಸ್ ಪರ ಅತ್ಯಧಿಕ ರನ್​ ಕಲೆಹಾಕಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಇನ್ನು ಈ ಪಟ್ಟಿಯಲ್ಲಿ ಪಂಟರ್ ಖ್ಯಾತಿಯ ರಿಕ್ಕಿ ಪಾಟಿಂಗ್ ಅಗ್ರಸ್ಥಾನದಲ್ಲಿದ್ದು, ಅವರು 667 ಇನಿಂಗ್ಸ್​ಗಳಲ್ಲಿ ಒಟ್ಟು 27368 ರನ್​ ಕಲೆಹಾಕಿದ್ದಾರೆ. ಇದು ಆಸೀಸ್‌ ಪರ ಇಂಟರ್​ನ್ಯಾಷನಲ್​ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ರನ್​ ಕಲೆಹಾಕಿದ ಮೊದಲಿಗರಾಗಿದ್ದಾರೆ.

ಜನವರಿ 3 ರಿಂದ ಆರಂಭವಾಗಲಿರುವ ಪಾಕಿಸ್ತಾನ್ ವಿರುದ್ಧದ 3ನೇ ಟೆಸ್ಟ್‌ ಪಂದ್ಯದ ಮೂಲಕ ವಾರ್ನರ್ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಲಿದ್ದಾರೆ.

ಆಸ್ಟ್ರೇಲಿಯಾ ಇನ್ನಿಂಗ್ಸ್‌:

ಮೆಲ್ಬೋರ್ನ್​ನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆದಿದೆ. ಡೇವಿಡ್ ವಾರ್ನರ್ (38) ಹಾಗೂ ಉಸ್ಮಾನ್ ಖ್ವಾಜಾ (42) ಗಳಿಸಿ ನಿರ್ಗಮಿಸಿದರೆ, ಕ್ರೀಸ್​ನಲ್ಲಿ ಮಾರ್ನಸ್ ಲಾಬುಶೇನ್ (22*) ಹಾಗೂ ಸ್ಟೀವ್ ಸ್ಮಿತ್ (19*) ಬ್ಯಾಟಿಂಗ್ ಮಾಡುತ್ತಿದ್ದಾರೆ. ಆಸೀಸ್‌ 54.3 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 141ರನ್‌ ಕಲೆಹಾಕಿ ಬ್ಯಾಟಿಂಗ್‌ ಮಾಡುತ್ತಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ