ಬೆಂಗಳೂರು: 2007ರ ಚೊಚ್ಚಲ ಪುರುಷರ ಟಿ20 ವಿಶ್ವಕಪ್‌ನಲ್ಲಿ (T20 World Cup) ಭಾರತದ ಪರ ಬೌಲಿಂಗ್ ಮಾಡಿ, ಗೆಲುವಿನ ನಗೆ ಬೀರುವಂತೆ ಮಾಡಿದ್ದ ವೇಗದ ಬೌಲರ್ ಜೋಗಿಂದರ್ ಶರ್ಮಾ ಅವರು ಇದೀಗ ಎಲ್ಲ ಮಾದರಿಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ. ಜೋಗಿಂದರ್ 2004 ಮತ್ತು 2007ರ ನಡುವೆ ನಾಲ್ಕು ಏಕದಿನ ಮತ್ತು ನಾಲ್ಕು ಟಿ20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದು ಒಟ್ಟಾರೆ ಐದು ವಿಕೆಟ್ಗಳನ್ನು ಪಡೆದಿದ್ದಾರೆ. ದೇಶೀಯ ಕ್ರಿಕೆಟ್ನಲ್ಲಿ ಹರಿಯಾಣವನ್ನು ಪ್ರತಿನಿಧಿಸುವ ಇವರು ಟ್ವಿಟರ್ನಲ್ಲಿ ನಿವೃತ್ತಿ ಕುರಿತು ಘೋಷಣೆ ಮಾಡಿದ್ದಾರೆ. 2007ರ ಟಿ20 ವಿಶ್ವಕಪ್ ಫೈನಲ್ನಲ್ಲಿ ಪಾಕಿಸ್ತಾನ ವಿರುದ್ಧ ಕೊನೆಯ ಓವರ್ನಲ್ಲಿ ತಂಡಕ್ಕೆ ಜಯ ತಂದುಕೊಟ್ಟಿದ್ದ ಜೋಗಿಂದರ್ ಇಂದುಕೂಡ ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ.