Mysore
22
broken clouds
Light
Dark

ICC t20 worldcup 2024: ಬಾಂಗ್ಲಾ ವಿರುದ್ದ ಗೆದ್ದ ಅಫ್ಘಾನ್‌ ಸೆಮಿಸ್‌ಗೆ ಇನ್‌, ಆಸೀಸ್‌ ಟೂರ್ನಿಯಿಂದ ಔಟ್‌!

ವಿನ್ಸೆಂಟ್‌: ಇಲ್ಲಿನ ಕಿಂಗ್ಸ್‌ಕೋರ್ಟ್‌ ಅರ್ನೋಸ್ ವೇಲ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್‌ ನ ಸೂಪರ್‌-8ನ ಕೊನೆಯ ಪಂದ್ಯದಲ್ಲಿ ಅಫ್ಘಾನಿಸ್ತಾನ ಬಾಂಗ್ಲಾದೇಶದ ವಿರುದ್ಧ 8 ರನ್‌ಗಳ ಅಂತರದ ಭರ್ಜರಿ ಗೆಲುವು ದಾಖಲಿಸಿತು. ಮೂಲಕ ಅಫ್ಘಾನ್‌ ಕ್ರಿಕೆಟ್‌ ವೃತ್ತಿ ಜೀವನದಲ್ಲೇ ಮೊಟ್ಟ ಮೊದಲ ಬಾರಿಗೆ ಸೆಮಿಸ್‌ ಗೆ ಲಗ್ಗೆಯಿಟ್ಟಿತು.

ಇತ್ತ ಅಫ್ಘಾನ್‌ ಗೆಲುವಿನೊಂದಿಗೆ ಸಂಭ್ರಮಿಸಿದರೇ, ಅಫ್ಘಾನ್‌ ಸೋಲಿಗಾಗಿ ಕಾಯುತ್ತಿದ್ದ ಆಸ್ಟ್ರೇಲಿಯಾ ಟೂರ್ನಿಯಿಂದ ಹೊರನಡೆಯಿತು.

ಈ ಪಂದ್ಯದಲ್ಲಿ ಟಾಸ್‌ ಗೆದ್ದ ಅಫ್ಘಾನಿಸ್ತಾನ ಮೊದಲು ಬ್ಯಾಟ್‌ ಮಾಡಿತು. ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 115 ರನ್‌ ಕಲೆಹಾಕಿ 116ರನ್‌ಗಳ ಸಾಧಾರಣ ಗುರಿ ನೀಡಿತ್ತು. ಈ ಮೊತ್ತ ಬೆನ್ನತ್ತಿದ ಬಾಂಗ್ಲಾದೇಶ 17.5 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು ಕೇವಲ 105ರನ್‌ ಕಲೆಹಾಕಿ 8 ರನ್‌ಗಳ ಅಂತರದಿಂದ ಸೋಲನುಭವಿಸಿತು.

ಅಫ್ಘಾನಿಸ್ತಾನ ಇನ್ನಿಂಗ್ಸ್‌: ಸೂಪರ್‌-8 ಕೊನೆಯ ಡೂ-ಆರ್‌-ಡೈ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಅಫ್ಘಾನ್‌ಗೆ ಆರಂಭಿಕ ಆಘಾತ ಎದುರಾಯಿತು. ಇಬ್ರಾಹಿಂ ಜದ್ರಾನ್‌ 18(29) ರನ್‌ ಗಳಿಸಿ ನಿರ್ಗಮಿಸಿದರು. ನಂತರ ಬಂದ ಅಜರತ್ತುಲ್ಲಾ 10(12) ಬಂದ ಹಾದಿಯಲ್ಲೇ ಪೆವಿಲಿಯನ್‌ ಸೇರಿದರು. ಗುಲ್ಬದಿನ್‌ ನೈಬ್‌ 4(3) ರನ್‌ ಗಳಿಸಿದರೆ, ನಬಿ 1(5) ರನ್‌ ಗಳಿಸಿ ಔಟಾದರು.

ತಂಡದ ವಿಕೆಟ್‌ಗಳು ಒಂದೆಡೆ ಬೀಳುತ್ತಿದ್ದರೂ ಮತ್ತೊಂದೆಡೆ ನಿಧಾನಗತಿಯ ಇನ್ನಿಂಗ್ಸ್‌ ಕಟ್ಟಿದ ಗುರ್ಬಾಜ್‌ 55 ಎಸೆತಗಳಲ್ಲಿ 3 ಬೌಂಡರಿ ಹಾಗೂ 1ಸಿಕ್ಸರ್‌ ಸಹಿತ 43 ರನ್‌ ಬಾರಿಸಿ ತಂಡಕ್ಕೆ ಆಸರೆಯಾದರು. ಕೊನೆಯಲ್ಲಿ ನಾಯಕ ರಶೀದ್‌ 19(10) ರನ್‌ ಹಾಗೂ ಜನತ್‌ 1(5)ರನ್‌ ಗಳಿಸಿ ಔಟಾಗದೇ ಉಳಿದರು.

ಬಾಂಗ್ಲಾದೇಶದ ಪರ ರಶೀದ್‌ ಹೊಸೇನ್‌ ಮೂರು, ಮುಸ್ತಫಿಜುರ್‌ ಹಾಗೂ ತಸ್ಕಿನ್‌ ಅಹ್ಮದ್‌ ತಲಾ ಒಂದೊಂದು ವಿಕೆಟ್‌ ಕಬಳಿಸಿದರು.

ಬಾಂಗ್ಲಾದೇಶ ಇನ್ನಿಂಗ್ಸ್‌: ಅಫ್ಘಾನಿಸ್ತಾನ ನೀಡಿದ್ದ ಸಾಧಾರಣ ಮೊತ್ತ ಬೆನ್ನತ್ತಿದ ಬಾಂಗ್ಲಾದೇಶಕ್ಕೆ ಅಫ್ಘನ್‌ ಸ್ಪಿನ್ನರ್ಸ್‌ ಕಾಡಿದರು. ಸಂಘಟಿತ ಬೌಲಿಂಗ್‌ ದಾಳಿಗೆ ಮಂಕಾದ ಬಾಂಗ್ಲಾ ಅಫ್ಘನ್‌ ಮುಂದೆ ಮಂಡಿಯೂರಿತು.

ಬಾಂಗ್ಲಾ ಪರವಾಗಿ ಆರಂಭಿಕ ಆಟಗಾರ ಲಿಟನ್‌ ದಾಸ್‌ ಅರ್ಧಶತಕ ಹೊರತಾಗಿ ಬೇರಾರಿಂದಲೂ ಉತ್ತಮ ಇನ್ನಿಂಗ್ಸ್‌ ಕಂಡುಬರಲೇ ಇಲ್ಲ. ನಾಟ್‌ಔಟ್‌ ಆಗಿ ಉಳಿದರೂ ಸಹಾ ಲಿಟನ್‌ ದಾಸ್‌ (54 ರನ್‌, 49 ಎಸೆತ 5 ಬೌಂಡರಿ 1ಸಿಕ್ಸರ್‌) ಪಂದ್ಯ ಗೆಲ್ಲಿಸಿಕೊಡಲು ಸಾಧ್ಯವಾಗಲಿಲ್ಲ.

ಆರಂಭಿಕ ಹಸನ್‌ ಶೂನ್ಯ ಸುತ್ತಿದರೇ, ನಾಯಕ ಸ್ಯಾಂಟೋ 5(5) ರನ್‌ ಬಾರಿಸಿದರು. ಉಳಿದಂತೆ ಅನುಭವಿ ಶಕೀಬ್‌ ಅಲ್‌-ಹಸನ್‌ ಡಕ್‌ಔಟ್‌ ಆಗಿ ಬಂದ ವೇಗದಲ್ಲೇ ಪೆವಿಲಿಯನ್‌ ಸೇರಿದರು. ಸೌಮ್ಯ ಸರ್ಕಾರ್‌ 10(10) ರನ್‌, ಹೃದಯ್‌ 14(9)ರನ್‌, ರಶೀದ್‌ ಹೊಸೇನ್‌ ಡಕ್‌ಔಟ್‌, ತಂಝೀಮ್‌ 3(10) ರನ್‌, ತಸ್ಕಿನ್‌ ಅಹ್ಮದ್‌ 2(9) ರನ್‌ ಹಾಗೂ ಮುಸ್ತಫಿಜುರ್‌ ಡಕ್‌ ಔಟ್‌ ಆಗುವ ಮೂಲಕ ಟೂರ್ನಿ ಅಭಿಯಾನವನ್ನು ಮುಗಿಸಿದರು.

ಈ ಪಂದ್ಯದಲ್ಲಿ ಬರೋಬ್ಬರಿ ನಾಲ್ಕು ಜನರು ಟಕ್‌ಔಟ್‌ ಆಗುವ ಮೂಲಕ ತಮ್ಮ ಕೈಯಲ್ಲಿದ್ದ ಅವಕಾಶ ಚೆಲ್ಲಿ ಅಫ್ಘಾನಿಸ್ತಾನ ಸೆಮಿಸ್‌ ಏರಲು ಬಾಂಗ್ಲಾ ಸಹಕರಿಸಿದರು.

ಅಫ್ಘಾನ್‌ ಪರ ನಾಯಕ ರಶೀದ್‌ ಖಾನ್‌ ಹಾಗೂ ನವೀನ್‌ ಉಲ್‌-ಹಕ್‌ ತಲಾ 4 ವಿಕೆಟ್‌ ಕಬಳಿಸಿ ಮಿಂಚಿದರು. ಫರೂಕಿ ಹಾಗೂ ನೈಬ್‌ ತಲಾ ಒಂದೊಂದು ವಿಕೆಟ್‌ ಪಡೆದು ಗಮನಸೆಳೆದರು.

ಪಂದ್ಯಶ್ರೇಷ್ಠ: ನವೀನ್‌ ಉಲ್‌-ಹಕ್‌