Mysore
26
scattered clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

5 ಸಿಕ್ಸ್​ಗಳೊಂದಿಗೆ ಅಬ್ಬರಿಸಿದ ಅಭಿನವ್: ಶಿವಮೊಗ್ಗ ಲಯನ್ಸ್​ಗೆ ರೋಚಕ ಜಯ

ಬೆಂಗಳೂರು : ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮಹಾರಾಜ ಟ್ರೋಫಿಯ 3ನೇ ಟಿ20 ಪಂದ್ಯದಲ್ಲಿ ಮಂಗಳೂರು ಡ್ರಾಗನ್ಸ್ ವಿರುದ್ದ ಶಿವಮೊಗ್ಗ ಲಯನ್ಸ್ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಮಂಗಳೂರು ತಂಡದ ನಾಯಕ ಕೃಷ್ಣಪ್ಪ ಗೌತಮ್ ಶಿವಮೊಗ್ಗ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು.

ಮೊದಲು ಬ್ಯಾಟ್ ಮಾಡಿದ ಶಿವಮೊಗ್ಗ ಲಯನ್ಸ್ ತಂಡಕ್ಕೆ ರೋಹನ್ ಕದಮ್ (27) ಹಾಗೂ ನಿಹಾಲ್ ಉಳ್ಳಾಲ್ (28) ಉತ್ತಮ ಆರಂಭ ಒದಗಿಸಿದರು. ಇನ್ನು 3ನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಿದ ರೋಹಿತ್ ಕುಮಾರ್ 18 ರನ್​ಗಳಿಸಿ ಔಟಾದರು.

ಆ ಬಳಿಕ ಜೊತೆಯಾದ ನಾಯಕ ಶ್ರೇಯಸ್ ಗೋಪಾಲ್ ಹಾಗೂ ಅಭಿನವ್ ಮನೋಹರ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿದರು. 32 ಎಸೆತಗಳಲ್ಲಿ 46 ರನ್ ಬಾರಿಸಿ ಶ್ರೇಯಸ್ ಗೋಪಾಲ್ ಔಟಾದರು.

ಆದರೆ ಇನ್ನೊಂದೆಡೆ ಸಿಡಿಲಬ್ಬರದ ಬ್ಯಾಟಿಂಗ್ ಮುಂದುವರೆಸಿದ ಅಭಿನವ್ ಮನೋಹರ್ 25 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 1 ಫೋರ್​ನೊಂದಿಗೆ 50 ರನ್ ಚಚ್ಚಿದರು. ಈ ಅರ್ಧಶತಕದ ನೆರವಿನೊಂದಿಗೆ ಶಿವಮೊಗ್ಗ ಲಯನ್ಸ್ ತಂಡವು 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 176 ರನ್ ಕಲೆಹಾಕಿತು.

177 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಮಂಗಳೂರು ಡ್ರಾಗನ್ಸ್ ತಂಡವು ನಿರೀಕ್ಷಿತ ಆರಂಭ ಪಡೆಯುವಲ್ಲಿ ವಿಫಲವಾಯಿತು. ಇದಾಗ್ಯೂ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೆ. ಸಿದ್ಧಾರ್ಥ್ 35 ಎಸೆತಗಳಲ್ಲಿ 46 ರನ್​ಗಳ ಕೊಡುಗೆ ನೀಡಿದರು.

ಹಾಗೆಯೇ 7ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಅನಿರುದ್ಧ್ ಜೋಶಿ ಮಂಗಳೂರು ಡ್ರಾಗನ್ಸ್ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದರು. ಸ್ಪೋಟಕ ಬ್ಯಾಟಿಂಗ್​ ಪ್ರದರ್ಶಿಸಿದ ಜೋಶಿ 31 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 3 ಫೋರ್​ಗಳೊಂದಿಗೆ ಅರ್ಧಶತಕ ಸಿಡಿಸಿದರು. ಈ ಹಂತದಲ್ಲಿ ವಿ. ಕೌಶಿಕ್ ಎಸೆತವನ್ನು ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಯಾಚ್ ಔಟ್ ಆದರು.

ಅಂತಿಮವಾಗಿ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 167 ರನ್ ಕಲೆಹಾಕುವ ಮೂಲಕ ಮಂಗಳೂರು ಡ್ರಾಗನ್ಸ್ ತಂಡವು 9 ರನ್​ಗಳಿಂದ ಸೋಲೊಪ್ಪಿಕೊಂಡಿತು. ಈ ಮೂಲಕ ಶಿವಮೊಗ್ಗ ಲಯನ್ಸ್ ತಂಡವು ತನ್ನ ಮೊದಲ ಪಂದ್ಯದಲ್ಲೇ ಜಯ ಸಾಧಿಸಿ ಶುಭಾರಂಭ ಮಾಡಿದೆ.

ಮಂಗಳೂರು ಡ್ರಾಗನ್ಸ್​ ಪ್ಲೇಯಿಂಗ್ 11: ನಿಕಿನ್ ಜೋಸ್ , ಶರತ್ ಬಿ.ಆರ್ (ವಿಕೆಟ್ ಕೀಪರ್) , ಕೃಷ್ಣಮೂರ್ತಿ ಸಿದ್ಧಾರ್ಥ್ , ಅನೀಶ್ವರ್ ಗೌತಮ್ , ಕೃಷ್ಣಪ್ಪ ಗೌತಮ್ (ನಾಯಕ) , ಅನಿರುದ್ಧ್ ಜೋಶಿ , ಆದಿತ್ಯ ಗೋಯಲ್ , ಆನಂದ್ ದೊಡ್ಡಮನಿ , ಪ್ರತೀಕ್ ಜೈನ್ , ನವೀನ್ ಎಂಜಿ , ಧೀರಜ್ ಜೆ ಗೌಡ , ರೋಹನ್ ಪಾಟೀಲ್.

ಶಿವಮೊಗ್ಗ ಲಯನ್ಸ್ ಪ್ಲೇಯಿಂಗ್ 11: ರೋಹನ್ ಕದಮ್ , ನಿಹಾಲ್ ಉಳ್ಳಾಲ್ (ವಿಕೆಟ್ ಕೀಪರ್) , ರೋಹಿತ್ ಕುಮಾರ್, ಶ್ರೇಯಸ್ ಗೋಪಾಲ್ (ನಾಯಕ) , ಅಭಿನವ್ ಮನೋಹರ್ , ಕ್ರಾಂತಿ ಕುಮಾರ್ , ಎಸ್ ಶಿವರಾಜ್ , ಪ್ರಣವ್ ಭಾಟಿಯಾ , ಎಚ್ ಎಸ್ ಶರತ್ , ನಿಶ್ಚಿತ್ ಎನ್ ರಾವ್ , ವಾಸುಕಿ ಕೌಶಿಕ್.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ