Mysore
18
overcast clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಬೆನ್‌ ಸ್ಟೋಕ್ಸ್‌ – ಎಂಎಸ್‌ ಧೋನಿ ನಾಯಕತ್ವದಲ್ಲಿರುವ ಸಾಮ್ಯತೆ ವಿವರಿಸಿದ ಎಬಿ ಡಿವಿಲಿಯರ್ಸ್!

ಬೆಂಗಳೂರು: ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ ಬಾಸ್ಟನ್‌ ಕ್ರೀಡಾಂಗಣದಲ್ಲಿ ನಡೆದ ದಿ ಆಷಸ್‌ ಟೆಸ್ಟ್‌ ಕ್ರಿಕೆಟ್‌ ಸರಣಿಯ ಮೊದಲ ಹಣಾಹಣಿಯಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಡುವೆ ಆತಿಥೇಯ ಇಂಗ್ಲೆಂಡ್‌ ಎದುರು ಆಸ್ಟ್ರೇಲಿಯಾ 2 ವಿಕೆಟ್‌ಗಳ ರೋಚಕ ಜಯ ದಾಖಲಿಸಿತು.

ಪಂದ್ಯದಲ್ಲಿ ಇಂಗ್ಲೆಂಡ್‌ ತಂಡ ಸೋತರು ನಾಯಕ ಬೆನ್‌ ಸ್ಟೋಕ್ಸ್‌ ಅನುಸರಿಸಿದ ಆಕ್ರಮಣಕಾರಿ ಆಟದ ರಣತಂತ್ರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅದರಲ್ಲೂ ಮೊದಲ ದಿನವೇ 383/8 ರನ್‌ಗಳಿಗೆ ಡಿಕ್ಲೇರ್‌ ಮಾಡಿ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದರು. ಬಳಿಕ ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ 7 ರನ್‌ಗಳ ಮುನ್ನಡೆಗಳಿಸಿದರೂ, ಪಂದ್ಯದ ಕೊನೇ ದಿನದಾಟದಲ್ಲಿ ಕೇವಲ 2 ವಿಕೆಟ್‌ ಅಂತರದಲ್ಲಿ ನಿರಾಶೆ ಅನುಭವಿಸಿತು.

ಈ ಬಗ್ಗೆ ಮಾತನಾಡಿರುವ ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಹಾಗೂ ಮಿಸ್ಟರ್‌ 360 ಖ್ಯಾತಿಯ ದಿಗ್ಗಜ ಬ್ಯಾಟರ್‌ ಎಬಿ ಡಿ’ವಿಲಿಯರ್ಸ್‌, ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌ ಅವರ ಕ್ಯಾಪ್ಟನ್ಸಿ ಶೈಲಿಯನ್ನು ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಮುನ್ನಡೆಸುತ್ತಿರುವ ಎಂಎಸ್‌ ಧೋನಿ ಅವರ ಶೈಲಿಗೆ ಹೋಲಿಕೆ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಗೆಲುವು ಕಾಣಲು ಪರಿಸ್ಥಿತಿಗಳಿಗೆ ತಕ್ಕಂತೆ ದಿಟ್ಟ ನಿರ್ಧಾರಗಳನ್ನು ತೆಗದುಕೊಳ್ಳುವುದರ ಮೇಲಿರುತ್ತದೆ ಎಂದು ಎಬಿಡಿ ತಮ್ಮ ಟ್ವಿಟರ್‌ ಗೋಡೆಯ ಮೇಲೆ ಬರೆದುಕೊಂಡಿದ್ದಾರೆ.

ಕಳೆದ ವರ್ಷ ಇಂಗ್ಲೆಂಡ್‌ ಟೆಸ್ಟ್‌ ತಂಡದ ಕ್ಯಾಪ್ಟನ್ಸಿಗೆ ಜೋ ರೂಟ್‌ ಗುಡ್‌-ಬೈ ಹೇಳಿದ್ದರು. ಬಳಿಕ ಮುಖ್ಯ ಕೋಚ್‌ ಬ್ರೆಂಡನ್‌ ಮೆಕಲಮ್ ಮತ್ತು ನೂತನ ನಾಯಕ ಬೆನ್‌ ಸ್ಟೋಕ್ಸ್‌ ಜೋಡಿ ಅಕ್ಷರಶಃ ಮೋಡಿ ಮಾಡಿದೆ. ಕಳೆದ 14 ಟೆಸ್ಟ್‌ಗಳಲ್ಲಿ ಇಂಗ್ಲೆಂಡ್‌ 10 ಪಂದ್ಯಗಳನ್ನು ಗೆದ್ದು ಬೀಗಿದೆ. ಸ್ಟೋಕ್ಸ್‌ ಮತ್ತು ಮೆಕಲಮ್‌ ಅವರ ‘ಬಾಝ್‌ಬಾಲ್‌’ ಶೈಲಿಯ ಆಕ್ರಮಣಕಾರಿ ಕ್ರಿಕೆಟ್‌ ಜಗತ್ತನ್ನು ಅಕ್ಷರಶಃ ಬೆರಗುಗೊಳಿಸಿದೆ.

“ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾ ನಡುವಣ ಪ್ರಥಮ ಟೆಸ್ಟ್ ಪಂದ್ಯಕ್ಕೆ ಬರ್ಮಿಂಗ್‌ಹ್ಯಾಮ್‌ನ ಹವಾಮಾನದ ಕಡೆಗೆ ನಾನು ಗಮನ ನೀಡಿರಲೇ ಇಲ್ಲ. ಇಂಗ್ಲೆಂಡ್‌ ತಂಡ ಅನುಸರಿಸಿದ ರಣತಂತ್ರ ನಿಜಕ್ಕೂ ಅರ್ಥಪೂರ್ಣ. ಇದನ್ನು ಯಾವ ರೀತಿ ಬೇಕಾದರೂ ನೀವು ಬಣ್ಣಿಸಿ. ಕೆಲವರು ಇದನ್ನು ಬ್ಯಾಝ್‌ ಬಾಲ್‌ ಎನ್ನುತ್ತಾರೆ. ನನಗಂತೂ ಇದು ಅತ್ಯಂತ ಜಾಣ್ಮೆಯ ಕ್ರಿಕೆಟ್‌ ಆಟ ಎಂದನ್ನಿಸಿದೆ. ಶ್ರೇಷ್ಟ ತಂಡಗಳು ಪರಿಸ್ಥಿತಿಗೆ ಹೊಂದಿಕೊಂಡು ಅದಕ್ಕೆ ತಕ್ಕ ಆಟವಾಡುತ್ತವೆ. ಇದರಿಂದ ಪಂದ್ಯ ಗೆಲ್ಲುವ ಉತ್ತಮ ಸ್ಥಿತಿಗೆ ಬಂದು ನಿಲ್ಲುತ್ತವೆ,” ಎಂದು ಎಬಿಡಿ ಟ್ವೀಟ್‌ ಮಾಡಿದ್ದಾರೆ.
“ಪಂದ್ಯ ಗೆಲ್ಲುವಂತಹ ಸ್ಥಿತಿಗೆ ತಲುಪಲು ಕೆಲ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಹೆಚ್ಚು ರಿವರ್ಸ್‌ ಸ್ವೀಪ್‌ಗಳನ್ನು ಆಡುವುದು ಹೀಗೆ ಪಂದ್ಯ ಗೆಲ್ಲಲು ವಿಭಿನ್ನ ಆಟವಾಡುವ ಅಗತ್ಯವಿರುತ್ತದೆ. ಈ ಆಟದ ಮೂಲಕ ಪಂದ್ಯದ ಮೇಲೆ ಪ್ರಭಾವ ಬೀರುವುದು ಬಹುಮುಖ್ಯವಾಗಿರುತ್ತದೆ. ವೈಯಕ್ತಿಕ ಆಟವಲ್ಲ, ಇಲ್ಲಿ ಒಣ ಪ್ರತಿಷ್ಠಿಗೆ ಅವಕಾಶ ಇರುವುದಿಲ್ಲ. ಅಂಕಿ ಅಂಶಗಳನ್ನು ಬದಿಗೊತ್ತಿ ಪಂದ್ಯ ಗೆಲ್ಲುವಂತಹ ಆಟವಾಡಬೇಕು. ವಿಶ್ವ ಶ್ರೇಷ್ಠ ತಂಡದಂತೆ ಕಾಣಿಸಬೇಕು. ಸದ್ಯಕ್ಕೆ ಇಂಗ್ಲೆಂಡ್‌ ತಂಡ ಆಡುತ್ತಿರುವುದು ಇದೇ ಆಟವನ್ನು. ಬೆನ್‌ ಸ್ಟೋಕ್ಸ್‌ ಸಾರಥ್ಯದ ಇಂಗ್ಲೆಂಡ್‌ ತಂಡ ಮತ್ತು ಎಂಎಸ್‌ ಧೋನಿ ಸಾರಥ್ಯದ ಸಿಎಸ್‌ಕೆ ತಂಡ ಆಡುತ್ತಿರುವುದು ಇದೇ ಮಾದರಿಯ ಕ್ರಿಕೆಟ್‌ ಆಗಿದೆ,” ಎಂದು ಡಿ’ವಿಲಿಯರ್ಸ್‌ ತಮ್ಮ ಟ್ವೀಟ್‌ನಲ್ಲಿ ವಿವರಿಸಿದ್ದಾರೆ.
Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!