ಕ್ರಿಕೆಟ್ ಲೋಕದಲ್ಲಿ ಆಗಾಗ ಹಲವಾರು ದಾಖಲೆಗಳು ನಿರ್ಮಾಣವಾಗುತ್ತಲೇ ಇರುತ್ತವೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಿರ್ಮಾಣವಾದ ದಾಖಲೆಗಳು ಸುದ್ದಿಯಾದರೆ, ದೇಶಿ ಕ್ರಿಕೆಟ್‌ನಲ್ಲಿ ನಿರ್ಮಾಣವಾದ ಅದೆಷ್ಟೋ ದಾಖಲೆಗಳು ಹೆಚ್ಚು ಸುದ್ದಿಯಾಗದೇ ಉಳಿದುಕೊಂಡಿವೆ. ಇದೀಗ ಯುರೋಪಿಯನ್ ಟಿ 10 ಕ್ರಿಕೆಟ್ ಸರಣಿಯಲ್ಲಿ ಬೃಹತ್ ವಿಶ್ವ ದಾಖಲೆಯೊಂದು ನಿರ್ಮಾಣವಾಗಿದೆ.
ಸ್ಪೇನ್‌ನಲ್ಲಿ ನಡೆಯುತ್ತಿರುವ ಈ ಸರಣಿಯ ಕ್ಯಾಟಲುನ್ಯ ಜಾಗ್ವಾರ್ ಹಾಗೂ ಸೋಹಲ್ ಹಾಸ್ಪಿಟಲ್ ತಂಡಗಳ ನಡುವಿನ ಪಂದ್ಯದಲ್ಲಿ ಹಂಝ ಸಲೀಮ್ ದಾರ್ ಎಂಬ ಬ್ಯಾಟ್ಸ್‌ಮನ್ ಅತಿವೇಗದ ಶತಕ ಬಾರಿಸಿದ ದಾಖಲೆ ಬರೆದಿದ್ದಾರೆ. ಕೇವಲ 24 ಎಸೆತಗಳಲ್ಲಿ ಹಂಝ ಸಲೀಮ್ ದಾರ್ ಶತಕ ಬಾರಿಸಿದರು.
ತಮ್ಮ ಇನ್ನಿಂಗ್ಸ್‌ನ ಆರಂಭದಿಂದಲೇ ಅಬ್ಬರದ ಬ್ಯಾಟಿಂಗ್ ನಡೆಸಿದ ಹಂಝ ಸಲೀಮ್ ದಾರ್ ಒಟ್ಟು 43 ಎಸೆತಗಳಲ್ಲಿ 22 ಸಿಕ್ಸರ್ ಹಾಗೂ 14 ಬೌಂಡರಿ ಬಾರಿಸುವ ಮೂಲಕ ಅಜೇಯ 193 ರನ್ ದಾಖಲಿಸಿದರು. ಹಂಝ ಸಲೀಮ್ ದಾರ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಕ್ಯಾಟಲುನ್ಯ ಜಾಗ್ವಾರ್ ತಂಡ 10 ಓವರ್‌ಗಳಲ್ಲಿ 257 ರನ್ ಕಲೆಹಾಕಿ ಸೋಹಲ್ ಹಾಸ್ಪಿಟಲ್ ತಂಡಕ್ಕೆ ಗೆಲ್ಲಲು 258 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲಗೊಂಡ ಸೋಹಲ್ ಹಾಸ್ಪಿಟಲ್ ತಂಡ 10 ಓವರ್‌ಗಳಲ್ಲಿ ಕೇವಲ 104 ರನ್ ಗಳಿಸಿತು ಹಾಗೂ ಕ್ಯಾಟಲುನ್ಯ ಜಾಗ್ವಾರ್ ತಂಡವು 153 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು.





