Mysore
26
clear sky

Social Media

ಮಂಗಳವಾರ, 20 ಜನವರಿ 2026
Light
Dark

ಖಾತೆಗಳ ನಿರ್ಬಂಧದ ಆದೇಶಗಳು ಸಕಾರಣವಾಗಿ ಬಳಕೆದಾರರಿಗೆ ತಿಳಿಸುವಂತಿರಬೇಕು: ಹೈಕೋರ್ಟ್‌ನಲ್ಲಿ ಟ್ವಿಟರ್‌ ವಾದ

ಬೆಂಗಳೂರು: ಕೇಂದ್ರ ಸರ್ಕಾರ ಹೊರಡಿಸುವ ಟ್ವಿಟರ್‌ ಖಾತೆ ನಿರ್ಬಂಧ ಆದೇಶದಲ್ಲಿ ಸಕಾರಣಗಳು ಇರಬೇಕು. ಆಗ ಅವುಗಳನ್ನು ಬಳಕೆದಾರರಿಗೆ ತಿಳಿಸಬಹುದು ಎಂದು ಹೈಕೋರ್ಟ್‌ನಲ್ಲಿ ಗುರುವಾರ ಟ್ವಿಟರ್‌ ವಾದಿಸಿತು.

ಕೆಲ ವೈಯಕ್ತಿಕ ಖಾತೆಗಳನ್ನು ನಿಷೇಧಿಸುವಂತೆ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಜಾರಿ ಮಾಡಿರುವ ನಿರ್ಬಂಧ ಆದೇಶಗಳನ್ನು ಪ್ರಶ್ನಿಸಿ ಟ್ವಿಟರ್‌ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು. ಕೇಂದ್ರ ಸರ್ಕಾರ ಹೊರಡಿಸಿರುವ ನಿರ್ಬಂಧದ ಆದೇಶಗಳಲ್ಲಿ ಸಕಾರಣಗಳನ್ನು ದಾಖಲಿಸದಿದ್ದರೆ ನಂತರದ ಸಂದರ್ಭದಲ್ಲಿ ಅವುಗಳನ್ನು ಸೃಷ್ಟಿಸುವ ಸಾಧ್ಯತೆ ಇರುತ್ತದೆ ಎಂದು ಟ್ವಿಟರ್‌ ಪರ ಹಿರಿಯ ವಕೀಲ ಅಶೋಕ ಹಾರನಹಳ್ಳಿ ವಾದಿಸಿದರು.

“ಸಕಾರಣದ ಅಥವಾ ಮೌಖಿಕ (ಸ್ಪೀಕಿಂಗ್‌) ಆದೇಶದ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಎರಡರಲ್ಲೂ ಸಕಾರಣಗಳು ಇರಬೇಕು. ಹೀಗಾದಲ್ಲಿ ನೊಂದವರು ಆದೇಶವನ್ನು ಪ್ರಶ್ನಿಸಬೇಕೆ ಅಥವಾ ಬೇಡವೇ ಎಂದು ನಿರ್ಧರಿಸಲು ಸಾಧ್ಯವಾಗುತ್ತದೆ” ಎಂದು ಹಿರಿಯ ವಕೀಲ ಅಶೋಕ ಹಾರನಹಳ್ಳಿ ವಾದಿಸಿದ್ದನ್ನು ಪೀಠವು ದಾಖಲಿಸಿಕೊಂಡಿತು.

ಟ್ವಿಟರ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಅಶೋಕ್‌ ಹಾರನಹಳ್ಳಿ ಅವರು “ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್‌ 69ಎ ನಲ್ಲಿ ಸಂವಹನ ಎಂಬ ಪದ ಗೈರಾಗಿರುವ ಮಾತ್ರಕ್ಕೆ ಸಕಾರಣಗಳ ಸಂವಹನಕ್ಕೆ ಅಡ್ಡಿಯಾಗುತ್ತದೆ ಎಂದರ್ಥವಲ್ಲ. ಇದರಲ್ಲಿ ಸಾರ್ವಜನಿಕ ಹಿತಾಸಕ್ತಿ ಇರಬೇಕಾಗುತ್ತದೆ” ಎಂದರು. “ಸಕಾರಣ ನೀಡುವುದಿಲ್ಲ ಮತ್ತು ಅದರ ಸಂವಹನ ಮಾಡುವುದಿಲ್ಲ ಎಂಬುದು ರಕ್ಷಣೆಯ ವಿರುದ್ಧವಾಗುತ್ತದೆ. ಇದರಿಂದ ಬಾಧಿತರಾದವರು ನ್ಯಾಯಾಲಯದಲ್ಲಿ ಪ್ರಶ್ನಿಸುವ ಅವಕಾಶವಿರಲಿದೆ” ಎಂದು ವಾದಿಸಿದರು. ಟ್ವಿಟರ್‌ ಪರ ವಕೀಲರು ವಾದ ಪೂರ್ಣಗೊಳಿಸಿದ್ದು, ಕೇಂದ್ರ ಸರ್ಕಾರವು ಪ್ರತಿಕ್ರಿಯೆ ದಾಖಲಿಸಲು ಕಾಲಾವಕಾಶ ಕೋರಿತು. ಹೀಗಾಗಿ, ವಿಚಾರಣೆಯನ್ನು ನ. 16ಕ್ಕೆ ಮುಂದೂಡಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!