Mysore
19
scattered clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಬೆಂಗಳೂರು ಡೈರಿ: ಇತಿಹಾಸ ಪುನರಾವರ್ತನೆಯ ಕನಸಿನಲ್ಲಿ ಸಿಎಂ ಬೊಮ್ಮಾಯಿ

 ಆರ್.ಟಿ.ವಿಠ್ಠಲಮೂರ್ತಿ

ಗುಜರಾತ್ ಎಲೆಕ್ಷನ್ ಎಫೆಕ್ಟ್‌ನಿಂದ ಬಸವರಾಜ ಬೊಮ್ಮಾಯಿ ಅವರಲ್ಲಿ ಚಿಗುರಿದೆ ಹೊಸ ಆಸೆ

ಗುಜರಾತ್ ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಒಂದು ಆಸೆ ಚಿಗುರಿದೆ. ಮೂವತ್ತೈದು ವರ್ಷಗಳಿಗೂ ಹಿಂದಿನ ಇತಿಹಾಸ ಮರುಕಳಿಸಲಿ ಎಂಬುದು ಈ ಆಸೆ.
ಅಂದ ಹಾಗೆ ೧೯೮೫ರಲ್ಲಿ ಆ ಇತಿಹಾಸ ನಿರ್ವಾಣವಾಗಿತ್ತು. ಅಂದರೆ ಆ ವರ್ಷ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜನತಾ ಪಕ್ಷ ಗೆದ್ದು ಅಧಿಕಾರ ಹಿಡಿದಿತ್ತು. ಅಷ್ಟೇ ಅಲ್ಲ, ರಾಮಕೃಷ್ಣ ಹೆಗಡೆಯವರು ಸತತ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ರಾಜ್ಯದ ಅದುವರೆಗಿನ ಇತಿಹಾಸದಲ್ಲಿ ಒಂದು ಪಕ್ಷ ಸತತವಾಗಿ ಎರಡು ಬಾರಿ ಅಧಿಕಾರ ಹಿಡಿದಿದ್ದು, ಒಬ್ಬ ನಾಯಕ ಸತತ ಎರಡನೇ ಬಾರಿ ಮುಖ್ಯಮಂತ್ರಿಯಾದ ಬೆಳವಣಿಗೆ ಹೊಸದೇನಾಗಿರಲಿಲ್ಲ.
ಆದರೆ ಕಾಂಗ್ರೆಸ್ ಯುಗವನ್ನು ಮೊದಲ ಬಾರಿ ಕತ್ತಲೆಗೆ ತಳ್ಳಿದ ನಂತರದಲ್ಲಿ ಅಂತಹ ಇತಿಹಾಸ ಪುನರಾವರ್ತನೆಯಾಗಿಲ್ಲ. ೧೯೮೩ರಲ್ಲಿ ಮೊಟ್ಟಮೊದಲ ಕಾಂಗ್ರೆಸ್ಸೇತರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ೧೯೮೫ರಲ್ಲಿ ಅದು ಪುನರಾವರ್ತನೆಯಾಯಿತು. ಅಸ್ತಿತ್ವದಲ್ಲಿದ್ದ ಸರ್ಕಾರವನ್ನು ವಿಸರ್ಜಿಸಿ ಮಧ್ಯಂತರ ಚುನಾವಣೆ ಎದುರಿಸಿದ ರಾಮಕೃಷ್ಣ ಹೆಗಡೆಯವರು ಪಕ್ಷ ಎರಡನೇ ಬಾರಿ ಅಧಿಕಾರಕ್ಕೆ ಬರುವಂತೆ ನೋಡಿಕೊಂಡರು. ಅದೇ ರೀತಿ ತಾವು ಕೂಡಾ ಎರಡನೇ ಬಾರಿ ಮುಖ್ಯಮಂತ್ರಿಯಾದರು.
ಇದಾದ ನಂತರ ಯಾವುದೇ ಒಂದು ಪಕ್ಷ ಸತತವಾಗಿ ಎರಡನೇ ಬಾರಿ ಅಧಿಕಾರಕ್ಕೆ ಬಂದಿಲ್ಲ. ಅಧಿಕಾರದಲ್ಲಿದ್ದವರು ಸಮ್ಮಿಶ್ರ ಸರ್ಕಾರದ ಪಾಲುದಾರರಾಗುವ ಅವಕಾಶ ಪಡೆದರೂ ಅದನ್ನು ಸ್ವಯಂಬಲದ ಸರ್ಕಾರ ಎನ್ನಲು ಸಾಧ್ಯವಿಲ್ಲ. ಅದೇ ರೀತಿ ಸಮ್ಮಿಶ್ರ ಸರ್ಕಾರದ ಪಾಲುದಾರರಾಗಿದ್ದವರು ನಂತರ ಸ್ವಯಂಬಲದ ಮೇಲೆ ಅಧಿಕಾರ ಪಡೆದರೂ ಅದು ಸತತ ಎರಡನೇ ಬಾರಿ ಅಧಿಕಾರ ಗಳಿಸಿದರೆಂದಲ್ಲ.
ಇನ್ನು ರಾಮಕೃಷ್ಣ ಹೆಗಡೆ ಅವರ ನಂತರ ಸತತವಾಗಿ ಎರಡನೇ ಬಾರಿ ಯಾರೂ ಮುಖ್ಯಮಂತ್ರಿಯಾಗಿಲ್ಲ. ಆದರೆ ೨೦೨೩ರ ಚುನಾವಣೆಯ ನಂತರ ಬಿಜೆಪಿ ಅಧಿಕಾರ ಗಳಿಸಿ, ತಾವು ಮುಖ್ಯಮಂತ್ರಿಯಾದರೆ ಈ ಇತಿಹಾಸ ಮರುಕಳಿಸುತ್ತದೆ ಎಂಬುದು ಬಸವರಾಜ ಬೊಮ್ಮಾಯಿ ಅವರ ಆಸೆ.
ಅಂದ ಹಾಗೆ ಗುಜರಾತ್ ರಾಜ್ಯದಲ್ಲೂ ಕಳೆದ ಐದು ವರ್ಷಗಳ ಅವಧಿಯಲ್ಲಿ ಹಲವು ರಾಜಕೀಯ ವಿಪ್ಲವಗಳು ನಡೆದಿವೆ. ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಗಳಾಗಿದ್ದ ಹಲವರು ಕೆಳಗಿಳಿದು ಕೊನೆಯ ಘಟ್ಟದಲ್ಲಿ ಭೂಪೇಂದ್ರ ಪಟೇಲ್ ಮುಖ್ಯಮಂತ್ರಿ ಹುದ್ದೆಗೇರಿದ್ದರು.
ಹಾಗೆ ನೋಡಿದರೆ ಈ ಬಾರಿ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ವಿಜಯ ಸಾಧಿಸಲು ಭೂಪೇಂದ್ರ ಪಟೇಲ್ ಅವರ ಕೊಡುಗೆ ಕಡಿಮೆ. ಅದು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕೈ ಚಳಕದ ಫಲ. ಅಲ್ಲಿ ಪಕ್ಷದಿಂದ ದೂರವಿದ್ದ ಸಮುದಾಯಗಳ ಮತಗಳನ್ನು ದೊಡ್ಡ ಮಟ್ಟದಲ್ಲಿ ಸೆಳೆಯಲು ಮಾಡಿದ ತಂತ್ರಗಾರಿಕೆಯಿಂದ ಹಿಡಿದು ಹಲವು ವಿಷಯಗಳು ಬಿಜೆಪಿಯ ಗೆಲುವಿನ ಅಂತರ ಹಿಗ್ಗುವಂತೆ ಮಾಡಿದವು.
ಹೀಗೆ ಗುಜರಾತಿನಲ್ಲಿ ಪಡೆದ ಭರ್ಜರಿ ವಿಜಯದ ನಂತರ ಮೋದಿ-ಅಮಿತ್ ಶಾ ಜೋಡಿ ಮುಖ್ಯಮಂತ್ರಿ ಹುದ್ದೆಗೆ ಬೇರೊಬ್ಬರನ್ನು ಪರಿಗಣಿಸಲಿಲ್ಲ. ಬದಲಿಗೆ ಕಳೆದ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಭೂಪೇಂದ್ರ ಪಟೇಲರನ್ನೇ ಮರಳಿ ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಿಸಲು ನಿರ್ಧರಿಸಿದರು.
ಇದಕ್ಕಿದ್ದ ಪ್ರಮುಖ ಕಾರಣವೆಂದರೆ, ಭೂಪೇಂದ್ರ ಪಟೇಲ್ ಹೇಳಿ ಕೇಳಿ ಮೋದಿ-ಅಮಿತ್ ಶಾ ಜೋಡಿಯ ಆಜ್ಞಾನುವರ್ತಿ. ಮೋದಿ-ಅಮಿತ್ ಶಾ ಏನೇ ಇಶಾರೆ ನೀಡಲಿ, ಭೂಪೇಂದ್ರ ಪಟೇಲ್ ಅದನ್ನು ನಿಷ್ಠೆಯಿಂದ ಚಾಚೂ ತಪ್ಪದಂತೆ ಪಾಲಿಸುತ್ತಾರೆ.
ಮುಖ್ಯಮಂತ್ರಿಯಾದ ನಂತರ ಅವರು ಮೋದಿ-ಅಮಿತ್ ಶಾ ಜೋಡಿಯ ಮಾತನ್ನು ಯಾವ ಹಂತದಲ್ಲೂ ಮೀರಿಲ್ಲ. ಬದಲಿಗೆ ಏನೇ ಇದ್ದರೂ ಅದನ್ನು ಮೋದಿ-ಅಮಿತ್ ಶಾ ಅವರ ಗಮನಕ್ಕೆ ತಂದಿದ್ದಾರೆ. ಪರಿಣಾಮ, ಅವರಿಗೆ ಸರ್ಕಾರ ನಡೆಸಲು ಏನೇ ಅಡ್ಡಿ-ಆತಂಕಗಳು ಎದುರಾದರೂ ಅವು ತನ್ನಿಂತಾನೆ ನಿವಾರಣೆಯಾಗಿವೆ. ಮಂತ್ರಿಮಂಡಲ ರಚನೆ ಎಂಬುದು ಯಾವುದೇ ಸರ್ಕಾರಗಳ ಪಾಲಿನ ಅತಿ ದೊಡ್ಡ ತಲೆನೋವು. ಆದರೆ ಭೂಪೇಂದ್ರ ಪಟೇಲ್ ಈ ವಿಷಯದಲ್ಲಿ ಸಮಸ್ಯೆ ಎದುರಿಸಿಲ್ಲ. ಏಕೆಂದರೆ ಇಂತಹ ಸಮಸ್ಯೆ ಎದುರಾದಾಗ ಮೋದಿ-ಅಮಿತ್ ಶಾ ಜೋಡಿ ನಿರ್ದಾಕ್ಷಿಣ್ಯವಾಗಿ ಅದನ್ನು ಬಗ್ಗು ಬಡಿದಿದೆ.
ಹೀಗಾಗಿ ಮಂತ್ರಿ ಪದವಿ ಆಕಾಂಕ್ಷಿಗಳು ಕೂಡಾ ಎಚ್ಚರಿಕೆಯಿಂದ ನಡೆದುಕೊಳ್ಳುವ ಸ್ಥಿತಿ ಅಲ್ಲಿ ನಿರ್ಮಾಣವಾಗಿತ್ತು. ಇವತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಕೂಡಾ ಭೂಪೇಂದ್ರ ಪಟೇಲ್ ನೇತೃತ್ವದ ಸರ್ಕಾರದ ಪಡಿಯಚ್ಚೇ ಅಲ್ಲವೇ?
ಬಸವರಾಜ ಬೊಮ್ಮಾಯಿ ಕೂಡಾ ಡಿಟ್ಟೋ ಭೂಪೇಂದ್ರ ಪಟೇಲರಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಆಜ್ಞಾನುವರ್ತಿ.
ಈ ಜೋಡಿ ಯಾವ ಸೂಚನೆ ನೀಡುತ್ತದೋ ಅದನ್ನು ಬೊಮ್ಮಾಯಿ ಚಾಚೂ ತಪ್ಪದಂತೆ ಪಾಲಿಸುತ್ತಾರೆ. ಪಕ್ಷ ಮತ್ತು ಸರ್ಕಾರದ ಮಟ್ಟದಲ್ಲಿ ಸೃಷ್ಟಿಯಾಗಿರುವ ಹಲವು ಗುಂಪುಗಳನ್ನು ಏಕಕಾಲಕ್ಕೆ ಓಲೈಸುತ್ತಾರೆ.
ಇನ್ನು ಮಂತ್ರಿಮಂಡಲ ವಿಸ್ತರಣೆ ಎಂಬ ತಲೆನೋವನ್ನು ಅಮೃತಾಂಜನ, ವಿಕ್ಸ್ ವೆಪೋರೆಬ್‌ಗಳ ಸಹಾಯವೇ ಇಲ್ಲದಂತೆ ಪರಿಹರಿಸಿಕೊಂಡಿದ್ದಾರೆ.
ಅಧಿಕಾರಕ್ಕೆ ಬಂದ ಶುರುವಿನಲ್ಲಿ ಮಂತ್ರಿ ಪದವಿ ಆಕಾಂಕ್ಷಿಗಳ ಒತ್ತಡ ಅತಿಯಾದರೆ ಬೊಮ್ಮಾಯಿ ಸೀದಾ ಹೊಸದಿಲ್ಲಿ ವಿಮಾನ ಹತ್ತುತ್ತಿದ್ದರು. ವಾಪಸ್ಸು ಬಂದ ಮೇಲೆ ಮಂತ್ರಿ ಪದವಿ ಆಕಾಂಕ್ಷಿಗಳ ಬಳಿ, ಇನ್ನಷ್ಟು ಕಾಲ ಕಾಯಲು ವರಿಷ್ಠರು ಹೇಳಿದ್ದಾರೆ ಎನ್ನುತ್ತಿದ್ದರು. ಹೀಗೆ ವರಿಷ್ಠರ ಹೆಸರನ್ನು ಬೊಮ್ಮಾಯಿ ಪ್ರಸ್ತಾಪಿಸಿದ ಕೂಡಲೇ ಮಂತ್ರಿ ಪದವಿ ಆಕಾಂಕ್ಷಿಗಳು ಮೆತ್ತಗಾಗುತ್ತಿದ್ದರು.
ಏಕೆಂದರೆ, ಈ ಸೂಚನೆಯ ವಿರುದ್ಧ ಅಪಸ್ವರವೆತ್ತಿದರೆ ಅದು ಮೋದಿ-ಅಮಿತ್ ಶಾ ವಿರುದ್ಧದ ಅಪಸ್ವರದಂತೆ ಭಾಸವಾಗುತ್ತದೆೆಯೇ ಹೊರತು ಬೊಮ್ಮಾಯಿ ವಿರುದ್ಧ ಅಲ್ಲವಲ್ಲ. ಹೀಗಾಗಿ ಬೊಮ್ಮಾಯಿ ಅಧಿಕಾರಕ್ಕೆ ಬಂದ ನಂತರದ ದಿನಗಳಲ್ಲಿ ಮಂತ್ರಿ ಪದವಿ ಆಕಾಂಕ್ಷಿಗಳು ಬಂಡಾಯವೆದ್ದಿಲ್ಲ.
ಹೀಗೆ ಯಾವುದೇ ಸಂದರ್ಭವನ್ನು ಮೋದಿ-ಅಮಿತ್ ಶಾ ನಾಮಬಲದ ಮೇಲೆ ಬೊಮ್ಮಾಯಿ ಎದುರಿಸುವುದರಿಂದ ಅವರ ವಿರುದ್ಧ ಹೊಸದಿಲ್ಲಿಯ ತನಕ ದೂರು ತೆಗೆದುಕೊಂಡು ಹೋಗುವವರೂ ಇಲ್ಲ. ಅರ್ಥಾತ್, ಮೋದಿ-ಅಮಿತ್ ಶಾ ಜೋಡಿ ಏನನ್ನು ಬಯಸಿತೋ ಹಾಗೆಯೇ ಬೊಮ್ಮಾಯಿ ನಡೆದುಕೊಳ್ಳುತ್ತಿದ್ದಾರೆ. ಅಂದ ಹಾಗೆ ಬೊಮ್ಮಾಯಿ ಬಗ್ಗೆ ನಮಗೆ ತೃಪ್ತಿಯಿಲ್ಲ ಅಂತ ಸಂಘಟನೆಯ ಮಟ್ಟದಲ್ಲಿ ಕೆಲವರು ಅಪಸ್ವರ ಎತ್ತುವುದಿದೆಯಾದರೂ ಅಂತಹ ಅಪಸ್ವರಗಳನ್ನು ಕೇಳುವವರೇ ಕಾಣುತ್ತಿಲ್ಲ.
ಹೀಗಾಗಿ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದರೆ ಮುಖ್ಯಮಂತ್ರಿ ಪಟ್ಟ ಪುನಃ ತಮಗೆ ಸಿಗುತ್ತದೆ ಎಂಬುದು ಬೊಮ್ಮಾಯಿ ಅವರ ವಿಶ್ವಾಸ.
ಅವರ ಈ ವಿಶ್ವಾಸ ನಿಜವಾಗುತ್ತದೆೆಯೋ? ಮೂರೂವರೆ ದಶಕಗಳ ಹಿಂದಿನ ಇತಿಹಾಸ ಪುನರಾವರ್ತನೆಯಾಗುತ್ತದೆಯೋ? ಎಂಬುದನ್ನು ಕಾದು ನೋಡಬೇಕು.

 

ಬಸವರಾಜ ಬೊಮ್ಮಾಯಿ ಕೂಡಾ ಡಿಟ್ಟೋ ಭೂಪೇಂದ್ರ ಪಟೇಲರಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಆಜ್ಞಾನುವರ್ತಿ.
ಈ ಜೋಡಿ ಯಾವ ಸೂಚನೆ ನೀಡುತ್ತದೋ ಅದನ್ನು ಬೊಮ್ಮಾಯಿ ಚಾಚೂ ತಪ್ಪದಂತೆ ಪಾಲಿಸುತ್ತಾರೆ. ಪಕ್ಷ ಮತ್ತು ಸರ್ಕಾರದ ಮಟ್ಟದಲ್ಲಿ ಸೃಷ್ಟಿಯಾಗಿರುವ ಹಲವು ಗುಂಪುಗಳನ್ನು ಏಕಕಾಲಕ್ಕೆ ಓಲೈಸುತ್ತಾರೆ.
ಇನ್ನು ಮಂತ್ರಿಮಂಡಲ ವಿಸ್ತರಣೆ ಎಂಬ ತಲೆನೋವನ್ನು ಅಮೃತಾಂಜನ, ವಿಕ್ಸ್ ವೆಪೋರೆಬ್‌ಗಳ ಸಹಾಯವೇ ಇಲ್ಲದಂತೆ ಪರಿಹರಿಸಿಕೊಂಡಿದ್ದಾರೆ.
ಅಧಿಕಾರಕ್ಕೆ ಬಂದ ಶುರುವಿನಲ್ಲಿ ಮಂತ್ರಿ ಪದವಿ ಆಕಾಂಕ್ಷಿಗಳ ಒತ್ತಡ ಅತಿಯಾದರೆ ಬೊಮ್ಮಾಯಿ ಸೀದಾ ಹೊಸದಿಲ್ಲಿ ವಿಮಾನ ಹತ್ತುತ್ತಿದ್ದರು. ವಾಪಸ್ಸು ಬಂದ ಮೇಲೆ ಮಂತ್ರಿ ಪದವಿ ಆಕಾಂಕ್ಷಿಗಳ ಬಳಿ, ಇನ್ನಷ್ಟು ಕಾಲ ಕಾಯಲು ವರಿಷ್ಠರು ಹೇಳಿದ್ದಾರೆ ಎನ್ನುತ್ತಿದ್ದರು. ಹೀಗೆ ವರಿಷ್ಠರ ಹೆಸರನ್ನು ಬೊಮ್ಮಾಯಿ ಪ್ರಸ್ತಾಪಿಸಿದ ಕೂಡಲೇ ಮಂತ್ರಿ ಪದವಿ ಆಕಾಂಕ್ಷಿಗಳು ಮೆತ್ತಗಾಗುತ್ತಿದ್ದರು.

 

 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ