ಕಳೆದ ಕೆಲ ದಿನಗಳ ಹಿಂದಷ್ಟೇ ಕಾಂಗ್ರೆಸ್ ಪಕ್ಷ ಸೇರಿದ್ದ ವೈ ಎಸ್ ರಾಜಶೇಖರ ರೆಡ್ಡಿ ಪುತ್ರಿ ವೈಎಸ್ ಶರ್ಮಿಳಾರನ್ನು ಇದೀಗ ಆಂಧ್ರಪ್ರದೇಶ ರಾಜ್ಯ ಘಟಕದ ಅಧ್ಯಕ್ಷೆಯನ್ನಾಗಿ ನೇಮಿಸಿದೆ. ತಮ್ಮ ವೈಎಸ್‌ಆರ್ ತೆಲಂಗಾಣ ಪಕ್ಷವನ್ನು ಕಾಂಗ್ರೆಸ್ ಪಕ್ಷದ ಜತೆ ವಿಲೀನಗೊಳಿಸುವುದಾಗಿ ಘೋಷಿಸಿದ್ದ ಶರ್ಮಿಳಾ ಜನವರಿ 4ರಂದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು.
ನಿನ್ನೆ ( ಜನವರಿ 15 ) ಗಿಡುಗು ರುದ್ರರಾಜು ಅವರು ಆಂಧ್ರಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಕೆಳಗಿಳಿದಿದ್ದರು. ಇದರ ಬೆನ್ನಲ್ಲೇ ಇದೀಗ ಶರ್ಮಿಳಾ ಆ ಸ್ಥಾನಕ್ಕೆ ಏರಿದ್ದಾರೆ. ಶರ್ಮಿಳಾ ಅವರನ್ನು ಅಧ್ಯಕ್ಷೆಯನ್ನಾಗಿ ನೇಮಿಸಿರುವ ಪತ್ರವನ್ನು ಕಾಂಗ್ರೆಸ್ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಟ್ವೀಟ್‌ಗೆ ಶರ್ಮಿಳಾ ಪ್ರತಿಕ್ರಿಯೆ ನೀಡಿ ಕಾಂಗ್ರೆಸ್‌ನ ಪ್ರಮುಖರಿಗೆ ಕೃತಜ್ಞತೆ ತಿಳಿಸಿದ್ದಾರೆ.
ತನ್ನನ್ನು ನಂಬಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷೆ ಸ್ಥಾನವನ್ನು ನೀಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಕೆಸಿ ವೇಣುಗೋಪಾಲ್ ಅವರಿಗೆ ಧನ್ಯವಾದ ತಿಳಿಸಿ ಟ್ವೀಟ್ ಮಾಡಿರುವ ಶರ್ಮಿಳಾ ಈ ಹಿಂದೆ ಆಂಧ್ರಪ್ರದೇಶದಲ್ಲಿದ್ದ ಕಾಂಗ್ರೆಸ್ ವೈಭವವನ್ನು ಮರು ನಿರ್ಮಾಣ ಮಾಡಲು ನಿಷ್ಠಾವಂತಳಾಗಿ ಕೆಲಸ ನಿರ್ವಹಿಸುವುದಾಗಿ ಬರೆದುಕೊಂಡಿದ್ದಾರೆ.