ನವದೆಹಲಿ : ಮುಂಬರುವ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಪರ್ಯಾಯವಾಗಿ ರಚನೆಯಾಗಿರುವ ಇಂಡಿಯ ಮೈತ್ರಿಕೂಟಕ್ಕೆ ಠಕ್ಕರ್ ಕೊಡಲು ಮುಂದಾಗಿರುವ ಬಿಜೆಪಿ, ಕ್ವಿಟ್ ಇಂಡಿಯ( ಭಾರತ ಬಿಟ್ಟು ತೊಲಗಿ) ಎಂಬ ಘೋಷ ವಾಕ್ಯವನ್ನು ಮುನ್ನಲೆಗೆ ತಂದಿದೆ.
ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದ ವಿರೋಧ ಪಕ್ಷಗಳ ಮೈತ್ರಿಕೂಟವು ಯುಪಿಎ ಬದಲಿಗೆ ಜನರ ಭಾವನೆಯನ್ನು ಸೆಳೆಯಲು ಇಂಡಿಯಾ ಎಂಬ ಮರುನಾಮಕರಣದೊಂದಿಗೆ ಮೈತ್ರಿಕೂಟವನ್ನು ರಚಿಸಿಕೊಂಡಿತು.
ಇದೀಗ ಇಂಡಿಯ ಮೈತ್ರಿಕೂಟಕ್ಕೆ ತಿರುಗೇಟು ನೀಡಲು ಮುಂದಾಗಿರುವ ಬಿಜೆಪಿ ಕ್ವಿಟ್ ಇಂಡಿಯ ಎಂಬ ಅಭಿಯಾನವನ್ನು ಲೋಕಸಭೆ ಚುನಾವಣೆಯಲ್ಲಿ ಆರಂಭಿಸಲು ಮುಂದಾಗಿದ್ದು, ಬಹುತೇಕ ಇದೇ ಘೋಷವಾಕ್ಯ ಪ್ರಚಾರದ ಮುನ್ನಲೆಗೆ ಬರಲಿದೆ.
1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬರುವ ಮುನ್ನ ಬ್ರಿಟಿಷರ ವಿರುದ್ಧ ಹೋರಾಟ ನಡೆಸಲು ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಅವರು ಅಂತಿಮ ಅಸ್ತ್ರವಾಗಿ ಕ್ವಿಟ್ ಇಂಡಿಯ ಚಳುವಳಿಗೆ ಕರೆಕೊಟ್ಟಿದ್ದರು.
ಇದರ ಪರಿಣಾಮ ಭಾರತೀಯರೆಲ್ಲರೂ ತಮ್ಮ ವೈಮನಸ್ಸು, ಭಿನ್ನಾಭಿಪ್ರಾಯ, ಜಾತಿ, ಧರ್ಮ ಮರೆತು ಬ್ರಿಟಿಷರ ವಿರುದ್ಧ ಒಂದಾಗಿ ದೇಶದ ಸ್ವತಂತ್ರಕ್ಕಾಗಿ ಧುಮುಕಿದ್ದರು.
ಈಗ ಇದೇ ಅಸ್ತ್ರವನ್ನು ಪ್ರತಿಪಕ್ಷಗಳ ವಿರುದ್ಧ ಬಳಸಲು ಮುಂದಾಗಿರುವ ಬಿಜೆಪಿ ಇಂಡಿಯಾಗೆ ಪರ್ಯಾಯವಾಗಿ ಕ್ವಿಟ್ ಇಂಡಿಯ ಅಭಿಯಾನವನ್ನು ದೇಶಾದ್ಯಂತ ನಡೆಸಿ ಮತದಾರರನ್ನು ತನ್ನತ್ತ ಸೆಳೆಯಲು ರಣತಂತ್ರ ರೂಪಿಸಿದೆ.
ಪ್ರಧಾನಿ ನರೇಂದ್ರಮೋದಿ ಅವರು ಕ್ವಿಟ್ ಇಂಡಿಯ ಚಳುವಳಿ ಸ್ಮರಣಾರ್ಥ ಮಾತನಾಡಿ, ಭ್ರಷ್ಟಾಚಾರ, ವಂಶ ಪಾರಂಪರ್ಯ ಹಾಗೂ ತುಷ್ಟೀಕರಣ ನಡೆಸುತ್ತಿರುವ ಇಂಡಿಯ ಮೈತ್ರಿಕೂಟವನ್ನು ಕ್ವಿಟ್ ಇಂಡಿಯಾದ ಮೂಲಕ ಪರಾಭವಗೊಳಿಸಬೇಕೆಂದು ದೇಶದ ಜನತೆಗೆ ಕರೆ ಕೊಟ್ಟಿದ್ದಾರೆ.