Mysore
14
broken clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಸಾವರ್ಕರ್‌ ಫೋಟೊ ವಿವಾದ: ಸಿಟಿ ರವಿ ನೀಡಿದ್ದ ʼಅಂಡಮಾನ್‌ ಜೈಲು ಭೇಟಿʼ ಆಫರ್‌ ಒಪ್ಪಿಕೊಂಡ ಪ್ರಿಯಾಂಕ್‌ ಖರ್ಗೆ

ವಿಧಾನಸಭೆಯಲ್ಲಿರುವ ಸಾವರ್ಕರ್‌ ಫೋಟೊ ಇದೀಗ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರ ನಡುವಿನ ವಾಕ್ಸಮರಕ್ಕೆ ಎಡೆ ಮಾಡಿಕೊಟ್ಟಿದೆ. ಈ ಫೋಟೊವನ್ನು ತೆರವುಗೊಳಿಸಲಾಗುತ್ತಂತೆ ಎಂಬ ಸುದ್ದಿ ಹರಿದಾಡಿದ ಬೆನ್ನಲ್ಲೇ ಕಾಂಗ್ರೆಸ್‌ ಸಚಿವ ಪ್ರಿಯಾಂಕ್‌ ಖರ್ಗೆ ವಿಧಾನಸಭೆಯಲ್ಲಿ ಹಾಕಿರುವ ಸಾವರ್ಕರ್‌ ಫೋಟೊವನ್ನು ತೆಗೆದು ಹಾಕುವ ಅವಕಾಶ ನನಗೆ ಸಿಕ್ಕರೆ ಈಗಲೇ ತೆರವು ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದರು.

ಈ ಹೇಳಿಕೆಗೆ ಟ್ವೀಟ್‌ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದ ಸಿಟಿ ರವಿ ಸಾವರ್ಕರ್‌ ಬ್ರಿಟಿಷರು ನೀಡಿದ್ದ ಕಷ್ಟವನ್ನು ಅನುಭವಿಸಿದ್ದ ಸ್ಥಳವಾದ ಅಂಡಮಾನ್‌ ಜೈಲಿಗೆ ಬಂದು ನೋಡಿ ಎಂದು ಪ್ರಿಯಾಂಕ್‌ ಖರ್ಗೆಗೆ ಆಹ್ವಾನ ನೀಡಿದ್ದರು. ಈ ಆಹ್ವಾನದ ಕುರಿತು ಇದೀಗ ಪ್ರಿಯಾಂಕ್ ಖರ್ಗೆ ಮಾತನಾಡಿದ್ದು, ಸಿಟಿ ರವಿ ನೀಡಿದ್ದ ಅಂಡಮಾನ್‌ ಜೈಲು ಭೇಟಿಯನ್ನು ಸ್ವೀಕರಿಸಿದ್ದಾರೆ. ಆದರೆ ಈಗ ಅಲ್ಲಿಗೆ ಭೇಟಿ ನೀಡಲು ಆಗುವುದಿಲ್ಲ, ಬರ ಸಮಸ್ಯೆ ಮುಗಿದ ನಂತರ ಜುಲೈ ತಿಂಗಳಿನಲ್ಲಿ ಭೇಟಿ ನೀಡುತ್ತೇನೆ, ಅಲ್ಲಿಯವರೆಗೆ ಅವರ ಆಫರ್‌ ಇರುತ್ತಾ? ಎಂದು ಪ್ರಶ್ನಿಸಿ ವ್ಯಂಗ್ಯವಾಡಿದ್ದಾರೆ.

ಸಿಟಿ ರವಿ ಆಫರ್‌ ಹೇಗಿತ್ತು?

ಟ್ವಿಟರ್‌ ಮೂಲಕ ಸಿಟಿ ರವಿ ಅವರು ಪ್ರಿಯಾಂಕ್‌ ಖರ್ಗೆಗೆ ನೀಡಿದ್ದ ಹೇಳಿಕೆಗೆ ಈ ಕೆಳಕಂಡಂತೆ ಟ್ವೀಟ್‌ ಮಾಡಿ ಅಂಡಮಾನ್ ಜೈಲಿಗೆ ಆಹ್ವಾನಿಸಿದ್ದರು.

” ಆತ್ಮೀಯರಾದ ಶ್ರೀಯುತ @PriyankKharge ಅವರೇ,

ತಾಯಿ ಭಾರತಿಯ ಮಡಿಲಿನಲ್ಲಿ ಜನಿಸಿದ ಮಹಾನ್ ರಾಷ್ಟ್ರೀಯವಾದಿ, ಕರಿನೀರ ವೀರ, ಹುತಾತ್ಮ ವೀರ್ ಸಾವರ್ಕರ್ ಅವರು, ಬ್ರಿಟಿಷರಿಂದ ಕಠಿಣ ಕಾರಾಗ್ರಹ ಶಿಕ್ಷೆಗೊಳಪಡಿಸುವ ತೀರ್ಪಿನಂತೆ, ಘೋರ ಕರಿನೀರಿನ ಶಿಕ್ಷೆ ಅನುಭವಿಸಿದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಇರುವ ಸೆಲ್ಯುಲರ್ ಜೈಲಿಗೆ ಭೇಟಿ ನೀಡಲು ನಿಮ್ಮನ್ನು ಆಹ್ವಾನಿಸುತ್ತೇನೆ. ಅಂದ ಹಾಗೆ ನಿಮ್ಮ ಪ್ರವಾಸದ ಸಂಪೂರ್ಣ ಖರ್ಚುವೆಚ್ಚ ನಾನೇ ಭರಿಸುತ್ತೇನೆ.

ಅತ್ತ ನಿಮ್ಮ ನೆಚ್ಚಿನ ನೆಹರು, ಶಿಕ್ಷೆಯ ನೆಪದಲ್ಲಿ, ಬ್ರಿಟಿಷರ ಜೈಲುಗಳಲ್ಲಿ ಐಷಾರಾಮಿ ಉಪಚಾರ ಪಡೆಯುತ್ತಿರುವಾಗ, ಇತ್ತ ಅಂಡಮಾನಿನ ಜೈಲಿನಲ್ಲಿ ವೀರ್ ಸಾವರ್ಕರ್ ಯಾವ ರೀತಿಯ ನೋವು ಮತ್ತು ಸಂಕಟವನ್ನು ಅನುಭವಿಸಿದರು ಎಂಬ ಸಣ್ಣ ಅನುಭೂತಿ ನಿಮಗಾಗಬಹುದು.

ಸೆಲ್ಲ್ಯುಲರ್ ಜೈಲಿನ ಆವರಣದಲ್ಲೇ “ಸಾವರ್ಕರ್ ಮತ್ತು ನೆಹರು ಇವರಿಬ್ಬರಲ್ಲಿ ನಿಜವಾದ ಸ್ವಾತಂತ್ರ್ಯ ಹೋರಾಟಗಾರ ಯಾರು?” ಎಂಬುದರ ಕುರಿತು ಬಹಿರಂಗ ಚರ್ಚೆ ನಡೆಸಲು ನಾನು ನಿಮಗೆ ಸವಾಲು ಹಾಕುತ್ತೇನೆ.

ವಿನಾಯಕ ದಾಮೋದರ್ ಸಾವರ್ಕರ್ ಅವರ ಫೋಟೋವನ್ನು ವಿಧಾನಸಭೆ ಅಥವಾ ಪರಿಷತ್ತಿನಿಂದ ತೆಗೆಯುವ ದುಸ್ಸಾಹಸ ಮಾಡಿದರೆ ಇಡೀ ರಾಜ್ಯದ ಜನತೆಯಾದಿಯಾಗಿ ನಾವೆಲ್ಲರೂ ಉಗ್ರ ಪ್ರತಿಭಟನೆ ನಡೆಸುತ್ತೇವೆ.

ಇಂದು ನೀವು ಅಧಿಕಾರದಲ್ಲಿರಬಹುದು, ನೆನಪಿಡಿ, ಮುಂದೆ ನಾವು ಅಧಿಕಾರಕ್ಕೆ ಬಂದಾಗ ನೆಹರೂ ಅವರ ಭಾವಚಿತ್ರ ವಿಧಾನಸೌಧದಲ್ಲಿ ಹೇಗೆ ಇರುತ್ತದೆ ನೋಡೋಣ.

ನೆನಪಿಡಿ, ಪರಿವಾರವಾದದ ಬಲದಿಂದ ಬೆಳೆದಂತಹ ಹೊಗಳುಭಟ್ಟರು ಬೇಕು ಎಂದಾಗ ಭಾವಚಿತ್ರ ಇಡಲಿಕ್ಕೆ, ಬೇಡ ಅಂದಾಗ ತೆಗಯಲಿಕ್ಕೆ , ವೀರ ಸಾವರ್ಕರ್ ಅವರು ನಿಮ್ಮ ಹಾಗೆ ಅಥವಾ ನೆಹರು ಅವರ ಹಾಗೆ ವಂಶವಾದದಿಂದ ಬೆಳೆದವರಲ್ಲ.”

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!