ಇದೇ ತಿಂಗಳ 22ರಂದು ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಈಗಾಗಲೇ ವಿವಿಧ ಕ್ಷೇತ್ರಗಳ ಗಣ್ಯರಿಗೆ ಆಮಂತ್ರಣವನ್ನು ನೀಡಲು ಆರಂಭಿಸಲಾಗಿದ್ದು, ಕಾಂಗ್ರೆಸ್ ಪಕ್ಷ ಈ ಕಾರ್ಯಕ್ರಮಕ್ಕೆ ತೆರಳದಿರಲು ನಿರ್ಧರಿಸಿದೆ.
ರಾಮಮಂದಿರ ಉದ್ಘಾಟನಾ ಕಾರ್ಯಕ್ರಮ ಬಿಜೆಪಿ ಪಕ್ಷದ ರಾಜಕೀಯ ಕಾರ್ಯಕ್ರಮ ಎಂದು ದೂಡಿರುವ ಕಾಂಗ್ರೆಸ್ ಈ ನಿರ್ಧಾರವನ್ನು ಕೈಗೊಂಡಿರುವುದಾಗಿ ತಿಳಿಸಿತ್ತು. ಇದೀಗ ರಾಹುಲ್ ಗಾಂಧಿ ಇಂದು ( ಜನವರಿ 16 ) ನಾಗಲ್ಯಾಂಡ್‌ನ ರಾಜಧಾನಿ ಕೊಹಿಮಾದಲ್ಲಿ ನಡೆದ ಭಾರತ್ ಜೋಡ್ ನ್ಯಾಯ್ ಯಾತ್ರೆಯ ಸಂದರ್ಭದಲ್ಲಿಯೂ ಇದೇ ಹೇಳಿಕೆಯನ್ನು ನೀಡಿದ್ದಾರೆ.
ಆರ್‌ಎಸ್‌ಎಸ್ ಮತ್ತು ಬಿಜೆಪಿ ಜನವರಿ 22ರ ಕಾರ್ಯಕ್ರಮವನ್ನು ಪೂರ್ಣವಾಗಿ ನರೇಂದ್ರ ಮೋದಿ ರಾಜಕೀಯ ಕಾರ್ಯಕ್ರಮವನ್ನಾಗಿ ಮಾಡಿವೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ. ಇದು ಆರ್‌ಎಸ್‌ಎಸ್ ಬಿಜೆಪಿ ಕಾರ್ಯಕ್ರಮವಾಗಿದ್ದು, ಕಾಂಗ್ರೆಸ್‌ನ ಅಧ್ಯಕ್ಷರು ಈ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದರು.
ಹಿಂದೂ ಧರ್ಮದ ವರಿಷ್ಠರು, ಹಿಂದೂ ಧರ್ಮದ ಮಠಾಧಿಪತಿಗಳೂ ಸಹ ಈ ಕಾರ್ಯವನ್ನು ರಾಜಕೀಯ ಕಾರ್ಯ ಎಂದು ಸಾರ್ವಜನಿಕವಾಗಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಹೀಗಾಗಿ ಭಾರತದ ಪ್ರಧಾನಿ ಹಾಗೂ ಆರ್‌ಎಸ್‌ಎಸ್ ಸುತ್ತ ವಿನ್ಯಾಸಗೊಳಿಸಲಾದ ಕಾರ್ಯಕ್ರಮಕ್ಕೆ ಹೋಗುವುದು ನನಗೆ ಸರಿ ಎನಿಸುವುದಿಲ್ಲ ಎಂದೂ ಸಹ ರಾಹುಲ್ ಗಾಂಧಿ ತಿಳಿಸಿದರು.





