ನವದೆಹಲಿ: ಫೆಬ್ರವರಿ ಹಾಗೂ ಮೇ ತಿಂಗಳುಗಳ ನಡುವೆ ರಾಜ್ಯಸಭೆಯ ಒಟ್ಟು 68 ಸದಸ್ಯರು ತಮ್ಮ ಅವಧಿ ಮುಗಿದ ನಂತರ ನಿವೃತ್ತರಾಗಲಿದ್ದು, ಈ ಸದಸ್ಯರನ್ನು ಉದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಸದನಕ್ಕೆ ನೀಡಿದ ಕೊಡುಗೆಯನ್ನು ಮೋದಿ ಶ್ಲಾಘಿಸಿದರು. ಈ ಹಿಂದೊಮ್ಮೆ ಮನಮೋಹನ್ ಸಿಂಗ್ ಮತ ಚಲಾಯಿಸಲು ಗಾಲಿಕುರ್ಚಿಯಲ್ಲಿ ಬಂದಿದ್ದನ್ನು ಉಲ್ಲೇಖಿಸಿ ಮೋದಿ ಪ್ರಶಂಸಿಸಿದರು.
“ಪ್ರಜಾಪ್ರಭುತ್ವವನ್ನು ಬಲಪಡಿಸಲು ಮನಮೋಹನ್ ಸಿಂಗ್ ಅವರು ಗಾಲಿಕುರ್ಚಿಯಲ್ಲಿ ರಾಜ್ಯಸಭೆಗೆ ಆಗಮಿಸಿ ಮತ ಚಲಾಯಿಸಿದ್ದರು. ಒಬ್ಬ ಸದಸ್ಯನಿಗೆ ತನ್ನ ಹಕ್ಕುಗಳ ಬಗ್ಗೆ ಜವಾಬ್ದಾರಿ ಇರಬೇಕು ಎನ್ನುವುದಕ್ಕೆ ಇದು ಉದಾಹರಣೆ” ಎಂದು ಮೋದಿ ಹೇಳಿದರು.