ನವದೆಹಲಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ಇದರ ಕುರಿತಾದ ಚರ್ಚೆಗಳು ಜೋರಾಗಿವೆ. ಯಾವ ಪಕ್ಷ ಎಷ್ಟು ಸ್ಥಾನಗಳಲ್ಲಿ ಗೆಲ್ಲಲಿವೆ ಎಂಬ ಊಹೆಗಳು ನಡೆಯುತ್ತಿರುವಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಎನ್‌ಡಿಎ ಮೈತ್ರಿಕೂಟ 400ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂದು ( ಫೆಬ್ರವರಿ 10 ) ನಡೆದ ಖಾಸಗಿ ಸಮಾರಂಭವೊಂದರಲ್ಲಿ ಮಾತನಾಡಿದ ಅಮಿತ್ ಶಾ ʼಲೋಕಸಭೆಯ ಚುನಾವಣೆಯ ಫಲಿತಾಂಶದ ಬಗ್ಗೆ ಯಾವುದೇ ಕುತೂಹಲವಿಲ್ಲ. ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಮತ್ತೊಮ್ಮೆ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಬೇಕಾಗುತ್ತದೆ ಎಂಬುದನ್ನು ಅರಿತುಕೊಂಡಿವೆʼ ಎಂದು ಹೇಳಿದರು.
ʼನಾವು ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ್ದೇವೆ. ಆದ್ದರಿಂದ ದೇಶದ ಜನರು ಬಿಜೆಪಿಗೆ 370 ಸ್ಥಾನಗಳನ್ನು ಮತ್ತು ಎನ್‌ಡಿಎಗೆ 400ಕ್ಕೂ ಹೆಚ್ಚು ಸ್ಥಾನಗಳನ್ನು ನೀಡಿ ಆಶೀರ್ವದಿಸುತ್ತಾರೆ. ಈ ಬಾರಿಯ ಚುನಾವಣೆ ಎನ್‌ಡಿಎ ಮತ್ತು ವಿರೋಧ ಪಕ್ಷಗಳ ನಡುವೆ ನಡೆಯುವ ಚುನಾವಣೆಯಲ್ಲ. ಬದಲಿಗೆ ಅಭಿವೃದ್ಧಿ ಮಾಡುವವರ ಮತ್ತು ಕೇವಲ ಘೋಷಣೆ ನೀಡುವವರ ನಡುವಿನ ಚುನಾವಣೆಯಾಗಿರಲಿದೆʼ ಎಂದೂ ಸಹ ಅಮಿತ್ ಶಾ ಹೇಳಿದರು.





