Mysore
15
scattered clouds

Social Media

ಶನಿವಾರ, 20 ಡಿಸೆಂಬರ್ 2025
Light
Dark

ಲೋಕಸಭೆ ಚುನಾವಣೆ 2024: ಹಾಸನದಿಂದ ಹೆಚ್‌ಡಿಡಿ ಕಣಕ್ಕೆ?

ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆ ಕುರಿತ ಚಟುವಟಿಕೆಗಳು ಈಗಾಗಲೇ ಆರಂಭವಾಗಿವೆ. ಈ ಬಾರಿ ಜೆಡಿಎಸ್‌ ಎನ್‌ಡಿಎ ಮೈತ್ರಿಕೂಟದ ಜತೆ ಕೈಜೋಡಿಸಿದ್ದು ಸೀಟು ಹಂಚಿಕೊಳ್ಳಲಿದೆ. ಇನ್ನು ಜೆಡಿಎಸ್‌ ಪರ ಈ ಬಾರಿ ಯಾವ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂಬ ಚರ್ಚೆಗಳೂ ಸಹ ಆರಂಭಗೊಂಡಿವೆ.

ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡ ಅವರಿಗೆ ಚುನಾವಣೆ ಸಮಯಕ್ಕೆ 91 ವರ್ಷ ವಯಸ್ಸಾಗಲಿದ್ದು ಈ ಬಾರಿ ಹೆಚ್‌ಡಿಡಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಅನುಮಾನ ಎಂದೇ ಎಣಿಸಲಾಗಿತ್ತು. ಆದರೆ ಇದೀಗ ದೇವೇಗೌಡ ಅವರು ಇಡುತ್ತಿರುವ ಹೆಜ್ಜೆ ಅವರು ಮತ್ತೆ ಚುನಾವಣೆಗೆ ಸ್ಪರ್ಧಿಸಲಿದ್ದಾರಾ ಎಂಬ ಅನುಮಾನ ಮೂಡಿಸಿದೆ. ಅದರಲ್ಲಿಯೂ ಈ ಬಾರಿ ಹಾಸನ ಕ್ಷೇತ್ರದಲ್ಲಿ ಕಣಕ್ಕಿಳಿಯಲಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.

ಹೌದು, ಲೋಕಸಭೆ ಚುನಾವಣೆಯ ಹಿನ್ನೆಲೆ ಹೆಚ್‌ಡಿ ದೇವೇಗೌಡ ಅವರು ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಶ್ರೀರಾಮದೇವರಕಟ್ಟೆಯಲ್ಲಿ ನಾಳೆ ( ಡಿಸೆಂಬರ್‌ 1 ) ವಿಶೇಷ ಸಭೆಯೊಂದನ್ನು ಕರೆದಿದ್ದಾರೆ. ಈ ಕುರಿತು ಪತ್ರವೊಂದನ್ನು ಬರೆದಿರುವ ದೇವೇಗೌಡರು ಸಂಸದರು, ಶಾಸಕರು, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಗಳ ಮಾಜಿ ಸದಸ್ಯರು ಹಾಗೂ ಪಕ್ಷದ ಮುಖಂಡರನ್ನು ಆಹ್ವಾನಿಸಿದ್ದಾರೆ.

ದೇವೇಗೌಡರ ಈ ನಡೆ ಇದೀಗ ಅವರು ಹಾಸನದಿಂದಲೇ ಚುನಾವಣೆಗೆ ಸ್ಪರ್ಧಿಸಲಿದ್ದಾರಾ ಎಂಬ ಪ್ರಶ್ನೆಯನ್ನು ಮೂಡಿಸಿದೆ. ಮೂಲಗಳ ಪ್ರಕಾರ ಜೆಡಿಎಸ್‌ ಈ ಬಾರಿ ಐದು ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಿಜೆಪಿಗೆ ಬೇಡಿಕೆ ಇಟ್ಟಿದೆ ಎಂದು ತಿಳಿದುಬಂದಿದ್ದು, ಹಾಸನದಿಂದ ದೇವೇಗೌಡರೇ ಕಣಕ್ಕಿಳಿಯಲಿದ್ದಾರಾ, ಪ್ರಜ್ವಲ್ ರೇವಣ್ಣ ಸ್ಪರ್ಧಿಸಲಿದ್ದಾರಾ ಅಥವಾ ಬೇರೆ ಯಾರಾದರೂ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರಾ ಎಂಬ ಕುತೂಹಲ ಕೆರಳಿಸಿದೆ. ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ ದೇವೇಗೌಡ ಅವರು ಹಾಸನ ಕ್ಷೇತ್ರವನ್ನು ತಮ್ಮ ಮೊಮ್ಮಗ ಪ್ರಜ್ವಲ್‌ ರೇವಣ್ಣಗೆ ಬಿಟ್ಟುಕೊಟ್ಟು ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಿ 13,339 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಹಾಸನದಿಂದ ಕಣಕ್ಕಿಳಿದಿದ್ದ ಪ್ರಜ್ವಲ್‌ ರೇವಣ್ಣ ಜಯಭೇರಿ ಬಾರಿಸಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!