Mysore
20
overcast clouds
Light
Dark

ಕೇಂದ್ರದಿಂದ ಹೆಚ್ಚಿನ ತೆರಿಗೆ ಪಾಲು ಪಡೆಯಲು ರಾಜ್ಯ ಸರ್ಕಾರದ ಹೊಸ ಯೋಜನೆ

ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ತೆರಿಗೆ ಹಣ ಪಾವತಿಸುವ ರಾಜ್ಯಗಳ ಪೈಕಿ ಮುಂಚೂಣಿಯಲ್ಲಿ ನಿಲ್ಲುವ ಕರ್ನಾಟಕಕ್ಕೆ ಸಿಗುತ್ತಿರುವ ತೆರಿಗೆ ಪಾಲಿನ ಮೊತ್ತವನ್ನು ವರ್ಷದಿಂದ ವರ್ಷಕ್ಕೆ ಇಳಿಕೆ ಮಾಡುತ್ತಿರುವುದರ ವಿರುದ್ಧ ದನಿ ಎತ್ತಲು ಕರ್ನಾಟಕ ಸಜ್ಜಾಗಿದೆ.

2025-26ರಿಂದ ಆರಂಭವಾಗಲಿರುವ 16ನೇ ಹಣಕಾಸು ಆಯೋಗದ ಮುಂದೆ ತಮ್ಮ ಪಾಲನ್ನು ಕೇಳುವ ಸಲುವಾಗಿ ರಾಜ್ಯ ಸರ್ಕಾರ ಅಭಿವೃದ್ಧಿ ಹೊಂದಿದ ರಾಜ್ಯಗಳನ್ನು ಒಗ್ಗೂಡಿಸುವತ್ತ ಚಿತ್ತ ನೆಟ್ಟಿದೆ. ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ಯಾಯಕ್ಕೆ ಒಳಗಾದ ರಾಜ್ಯಗಳಿಗೆ ನ್ಯಾಯಯುತವಾದ ಹಕ್ಕನ್ನು ಒದಗಿಸಲು ಮುಂದಾಗಿದ್ದಾರೆ. ಹಣಕಾಸು ಆಯೋಗದ ಮುಂದೆ ಮಂಡಿಸಲು ವಾದದ ನೆಲೆ ರೂಪಿಸಲು ʼವಿಶೇಷ ಕೋಶʼ ರಚಿಸಲು ನಿರ್ದೇಶನ ನೀಡಿದ್ದಾರೆ ಎಂದೂ ಸಹ ತಿಳಿದುಬಂದಿದೆ.

15ನೇ ಹಣಕಾಸು ಆಯೋಗ ರಚನೆಯಾಗುವ ತನಕ ರಾಜ್ಯಕ್ಕೆ ಸಮಾಧಾನಕರವಾದ ಪಾಲು ಸಿಗುತ್ತಿತ್ತು. ಆನಂತರ ತೆರಿಗೆ ಪಾಲು, ಕೇಂದ್ರದ ಅನುದಾನ ಹಾಗೂ ಸಹಾಯಧನ ಕುಸಿಯುತ್ತಲೇ ಬಂತು. ʼ15ನೇ ಹಣಕಾಸು ಆಯೋಗದ ಅವಧಿಯಲ್ಲಿ ಕರ್ನಾಟಕಕ್ಕೆ ಒಂದು ಪ್ರಮುಖ ಮತ್ತು ಗಂಭೀರ ಸವಾಲು ಎದುರಾಯಿತು. ಕೇಂದ್ರ ತೆರಿಗೆಗಳ ಪಾಲು ಕಡಿಮೆಯಾಯಿತು. 14ನೇ ಹಣಕಾಸು ಅವಧಿಯಲ್ಲಿ ಶೇ. 1.98ರಷ್ಟಿದ್ದ ತೆರಿಗೆಯಲ್ಲಿ ಭಾಗವಹಿಸಬಹುದಾದ ಗುಣಕವು 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಶೇ. 1.5ಕ್ಕೆ ಕುಸಿಯಿತು. ಎರಡು ಆಯೋಗದ ಶಿಫಾರಸುಗಳ ನಡುವೆ ಕರ್ನಾಟಕವು ಕೇಂದ್ರದ ತೆರಿಗೆ ವರ್ಗಾವಣೆಯ ಪಾಲಿನಲ್ಲಿ ಶೇ. 24.5ರಷ್ಟು ಕುಸಿತ ಕಂಡಿತುʼ ಎಂದು 2023ರ ಮಾರ್ಚ್‌ನಲ್ಲಿ ವಿಧಾನಸಭೆಯಲ್ಲಿ ಮಂಡಿಸಲಾದ ಆರ್ಥಿಕ ಸಮೀಕ್ಷೆ ಉಲ್ಲೇಖಿಸಿದೆ.

14ನೇ ಹಣಕಾಸು ಆಯೋಗದ ಅವಧಿಯಲ್ಲಿ ಶೇ. 4.71ರಷ್ಟು ಪಾಲು ಕರ್ನಾಟಕಕ್ಕೆ ಲಭಿಸಿತ್ತು. ಆದರೆ 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಇದನ್ನು ಶೇ. 3.64ಕ್ಕೆ ಇಳಿಸಲಾಯಿತು. ಇದರಿಂದಾಗಿ ಕರ್ನಾಟಕಕ್ಕೆ ಮೂರು ವರ್ಷಗಳಲ್ಲಿ 26,140 ಕೋಟಿ ರೂಪಾಯಿ ಕೊರತೆ ಉಂಟಾಗಿದೆ ಎಂದು ಕಾಂಗ್ರೆಸ್‌ ಸರ್ಕಾರ ಹೇಳುತ್ತಿದೆ.

ಇನ್ನು ಈ ಕುರಿತು ಸಿಎಂ ಸಿದ್ದರಾಮಯ್ಯ ದನಿಯನ್ನೂ ಸಹ ಎತ್ತಿದ್ದರು. 2019-23ರ ಅವಧಿಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾಗ ಸಿದ್ದರಾಮಯ್ಯ ಈ ವಿಷಯವನ್ನು ಉಲ್ಲೇಖಿಸಿದ್ದರು. ಅಲ್ಲದೇ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಳಿಕ ಜುಲೈನಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಸಿದ್ದರಾಮಯ್ಯ ನೇರವಾಗಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.

ನರೇಂದ್ರ ಮೋದಿ ಸರ್ಕಾರ ತೆರಿಗೆ ಹಣ ಹಂಚಿಕೆ ಮಾಡುವ ವಿಧಾನವನ್ನು ಬದಲಾಯಿಸಿದ್ದೇ ಈ ಕುಸಿತಕ್ಕೆ ಕಾರಣ. ಹೆಚ್ಚು ತೆರಿಗೆ ಸಂಗ್ರಹವಾಗುವ ರಾಜ್ಯಗಳಿಗೆ ಹೆಚ್ಚಿನ ಪಾಲನ್ನು ನೀಡುವ ಬದಲಾಗಿ ಹಿಂದುಳಿದಿರುವಿಕೆ, ಜನಸಂಖ್ಯೆ ಹಾಗೂ ಇನ್ನಿತರ ಮಾನದಂಡಗಳ ಆಧಾರದ ಮೇಲೆ ತೆರಿಗೆ ಹಣವನ್ನು ಹಂಚಿಕೆ ಮಾಡಲು ಮೋದಿ ಸರ್ಕಾರ ಮುಂದಾಯಿತು. ಒಟ್ಟು ಜಿಡಿಪಿಯ ಮೂರನೇ ಒಂದರಷ್ಟು ಭಾಗ ಹಾಗೂ ತೆರಿಗೆಯ ಶೇ.30 ರಷ್ಟು ಮೊತ್ತ ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರ ಪ್ರದೇಶ ಹಾಗೂ ಕೇರಳ ರಾಜ್ಯಗಳಿಂದ ಸಂಗ್ರಹವಾಗುತ್ತಿದ್ದು, ತೆರಿಗೆ ಹಣವನ್ನು ನೀಡುವಾಗ ಉತ್ತರ ಪ್ರದೇಶ, ಬಿಹಾರ ಹಾಗೂ ಮತ್ತಿತರ ರಾಜ್ಯಗಳಿಗೆ ಹೆಚ್ಚಿನ ಮೊತ್ತ ಬಿಡುಗಡೆಯಾಗುತ್ತಿದೆ.

ಕೇಂದ್ರ ಸರ್ಕಾರದ ಈ ತಾರತಮ್ಯದ ವಿರುದ್ಧ ದನಿ ಎತ್ತಲು ಮುಂದಾಗಿರುವ ರಾಜ್ಯ ಸರ್ಕಾರ ದಕ್ಷಿಣ ರಾಜ್ಯಗಳ ಜತೆಗೆ ಅನ್ಯಾಯಕ್ಕೊಳಗಾದ ಉಳಿದ ರಾಜ್ಯಗಳನ್ನೂ ಸೇರಿಕೊಳ್ಳಲು ಚಿಂತನೆ ನಡೆಸಿದೆ ಎನ್ನಲಾಗಿದೆ.

16ನೇ ಹಣಕಾಸು ಆಯೋಗವು 2026ರ ಏಪ್ರಿಲ್‌ 1ರಂದು ಆರಂಭವಾಗಲಿದ್ದು, ಇದು 5 ವರ್ಷ ಅವಧಿಗಳದ್ದಾಗಿದೆ. ನೀತಿ ಆಯೋಗದ ಮಾಜಿ ಅಧ್ಯಕ್ಷರು ಹಾಗೂ ಕೊಲಂಬಿಯಾ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಅರವಿಂದ್‌ ಪನಗಡಿಯಾ ಈ ಆಯೋಗದ ಅಧ್ಯಕ್ಷತೆ ವಹಿಸಲಿದ್ದಾರೆ.

ಜನಸಂಖ್ಯೆ ಆಧಾರದ ಮೇಲೆ ತೆರಿಗೆ ಪಾಲು ಹಂಚಿಕೆ ಮಾಡುವುದನ್ನು ನಿಲ್ಲಿಸಬೇಕು. ಬದಲಾಗಿ ಅಭಿವೃದ್ಧಿ ಹೊಂದದೇ ಇರುವ ರಾಜ್ಯಗಳಿಂದ ಅಭಿವೃದ್ಧಿ ಹೊಂದಿದ ರಾಜ್ಯಗಳಿಗೆ ಬರುತ್ತಿದ್ದು, ಇಂತಹ ʼಗಮ್ಯ ರಾಜ್ಯʼಗಳಿಗೆ ಹೆಚ್ಚಿನ ಪಾಲನ್ನು ನೀಡಬೇಕು ಎಂದು ರಾಜ್ಯ ಸರ್ಕಾರ ವಾದ ಮಂಡಿಸಲಿದೆ ಎಂದು ತಿಳಿದುಬಂದಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ