ಇದೇ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯ ಕುರಿತು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮಾತನಾಡಿದರು. ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವೇಗೌಡ ಅವರು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ನಾನು ಭಾಗವಹಿಸುವುದಿಲ್ಲ ಎಂದು ಹೇಳಿಕೆ ನೀಡಿದರು.
ಇನ್ನೂ ಎರಡು ವರ್ಷಗಳ ಕಾಲ ರಾಜ್ಯಸಭಾ ಸದಸ್ಯ ಅವಧಿ ಇದ್ದು, ನನಗೆ 91 ವರ್ಷ ವಯಸ್ಸಾಗಿದೆ, ನೆನಪಿನ ಶಕ್ತಿ ಇದೆ, ಓಡಾಡಲು ಕಷ್ಟವಾಗುತ್ತದೆ. ಆದರೂ ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತೇನೆ ಎಂದು ದೇವೇಗೌಡ ಹೇಳಿದರು.
ಇನ್ನು ಕುಮಾರಸ್ವಾಮಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಭಾಗವಹಿಸುತ್ತಾರೆ ಎಂಬ ಚರ್ಚೆಗಳ ಬಗ್ಗೆಯೂ ಸಹ ಪ್ರತಿಕ್ರಿಯಿಸಿದ ದೇವೇಗೌಡ ಗಾಳಿಸುದ್ದಿಗಳ ಬಗ್ಗೆ ನಾನು ಮಾತನಾಡಲ್ಲ, ಮೋದಿ ಅವರು ಏನಾದರೂ ಹೇಳಿದರೆ ಆಗ ನಾವೆಲ್ಲಾ ಕುಳಿತು ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ಹೆಚ್ ಡಿ ಕುಮಾರಸ್ವಾಮಿ ಕೇಂದ್ರ ಸಚಿವರಾಗುವ ವಿಷಯ ನನ್ನ ಮುಂದೆ ಚರ್ಚೆಯಾಗಿಲ್ಲ. ಮೋದಿ ಅವರ ಮನಸ್ಸಿನಲ್ಲಿ ಏನಿದೆಯೋ ಗೊತ್ತಿಲ್ಲ. ಅವರು ಏನನ್ನೂ ಸಹ ಬಿಟ್ಟುಕೊಡುವುದಿಲ್ಲ. ಅವರ ಜತೆಗಿರುವ ಪೊಲೀಸರಿಗೂ ಸಹ ಅದು ಗೊತ್ತಾಗಲ್ಲ ಎಂದು ತಿಳಿಸಿದರು.