Mysore
20
overcast clouds
Light
Dark

ಕಾಂಗ್ರೆಸ್ ಆಫೀಸ್ ಅನ್ನು ನಾನು ಹೆಡ್ಡಾಫೀಸ್ ಮಾಡಿಕೊಳ್ಳಲು ಆಗುತ್ತದೆಯೇ : ಹೆಚ್‌ಡಿಕೆ ಪ್ರಶ್ನೆ !

  • ಕಾಂಗ್ರೆಸ್ ಟೀಕೆಗೆ ತಿರುಗೇಟು ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ
  • ಮೇಕೆದಾಟು ಪಾದಯಾತ್ರೆಯಲ್ಲಿ ನಾನು ತೂರಾಡಿದ್ನಾ?
  • ಬಿಜೆಪಿಗೆ ಕೇಶವ ಕೃಪ ಹೇಗೋ ನಮ್ಮ ಪಕ್ಷಕ್ಕೆ ನಮ್ಮ ತೋಟದ ಮನೆಯೂ ಹಾಗೆಯೇ : ಹೆಚ್‌ಡಿಕೆ

ಬೆಂಗಳೂರು: ಬಿಡದಿಯ ನನ್ನ ತೋಟವನ್ನು ಜೆಡಿಎಸ್ ಹೆಡ್ಡಾಫೀಸ್ ಎಂದು ಟೀಕೆ ಮಾಡಿರುವ ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ಕೊಟ್ಟಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು; ನಾನು ಕಾಂಗ್ರೆಸ್ ಕಚೇರಿಯನ್ನು ಹೆಡ್ಡಾಫೀಸ್ ಮಾಡಿಕೊಳ್ಳಲು ಸಾಧ್ಯವೇ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತಾಡುತ್ತಾ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ಅವರು, ಬಿಡದಿಯ ನನ್ನ ತೋಟವೇ ನನ್ನ ಪಕ್ಷದ ಹೆಡ್ಡಾಫೀಸ್. ಅದರಲ್ಲಿ ತಪ್ಪೇನಿದೆ? ನಾನು ಪಕ್ಷದ ಅಧ್ಯಕ್ಷನಿದ್ದೇನೆ. ಅಲ್ಲಿ ನಾನು ನಮ್ಮ ಪಕ್ಷದ ಕೆಲ ಮುಖಂಡರ ಸಭೆ ಕರೆದಿದ್ದೆ. ಅಲ್ಲದೆ, ನನ್ನ ತೋಟದಲ್ಲಿ 120 ಜನ ಈಗಲೂ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಊಟದ ವ್ಯವಸ್ಥೆ ಮಾಡಿದ್ದೆವು. ಮಾಡಬಾರದು ಅನ್ನೋಕೆ ಅದೇನು ಕಾಂಗ್ರೆಸ್ ಹೆಡ್ಡಾಫೀಸಾ? ಬಿಜೆಪಿಗೆ ಕೇಶವ ಕೃಪ ಹೇಗೋ ನಮ್ಮ ಪಕ್ಷಕ್ಕೆ ನಮ್ಮ ತೋಟದ ಮನೆಯೂ ಹಾಗೆಯೇ ಎಂದು ಕಾಂಗ್ರೆಸ್ ಪಕ್ಷವನ್ನು ಕುಟುಕಿದರು.

ಕಾಂಗ್ರೆಸ್ ನಾಯಕರು ವಿಧಾನಸಭೆ ಚುನಾವಣೆಗೆ ಮೊದಲು ಮೇಕೆದಾಟು ಪಾದಯಾತ್ರೆ ಮಾಡಿದ್ದರು. ಪಾದಯಾತ್ರೆಯಲ್ಲಿ ತೂರಾಡಿದ್ದು ಯಾರು? ನಾನು ತೂರಾಡಿದ್ನಾ? ನನಗೂ ಏನು ಮಾಡಬೇಕು, ಮಾಡಬಾರದು ಎಂದು ಗೊತ್ತಿದೆ. ಅಲ್ಲಿನ ತಹಶಿಲ್ದಾರ್ ಅವರಿಗೆ ಪದೇಪದೆ ಫೋನ್ ಕರೆ ಮಾಡಿ ಒತ್ತಡ ಹೇರಿದ್ದಾರೆ. ಏನು ಸಿಕ್ಕಿಲ್ಲ ಅಲ್ಲಿ. ಇಷ್ಟು ಚುನಾವಣೆ ಮಾಡಿದವನಿಗೆ ಏನು ಮಾಡಬೇಕು ಅನ್ನೋದು ಗೊತ್ತಿಲ್ಲವಾ? ಎಂದು ಖಾರವಾಗಿ ಪ್ರಶ್ನಿಸಿದರು.

ನಾವು ಬಿಡದಿ ತೋಟದಲ್ಲಿ ಗ್ಲಾಸ್ ಇಟ್ಟು ಪಾರ್ಟಿ ಮಾಡ್ತಿಲ್ಲ, ಹಾಗೆ ಮಾಡೋದು ಕಾಂಗ್ರೆಸ್ ಸಂಸ್ಕೃತಿ. ಅಂತಹ ಕೆಲಸವನ್ನು ಕಾಂಗ್ರೆಸ್ ನಿರಂತರವಾಗಿ ಮಾಡಿಕೊಂಡು ಬಂದಿದೆ ಎಂದು  ಆರೋಪ ಮಾಡಿದರು.