ಬೆಂಗಳೂರು: ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಲು ಇನ್ನು ಕೆಲ ದಿನಗಳಷ್ಟೇ ಬಾಕಿ ಉಳಿದಿರುವಂತೆಯೇ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಪಕ್ಷದ ಮುಖಂಡರ ಸರಣಿ ಸಭೆಗಳನ್ನು ನಡೆಸಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿ ರಾಮನಗರ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಪ್ರಮುಖ ಮುಖಂಡರ ಸಭೆ ಕರೆದಿದ್ದರು. ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ, ರಾಮನಗರ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕರಾದ ಎ.ಮಂಜುನಾಥ್ ಸೇರಿ ಕ್ಷೇತ್ರದ ಅನೇಕ ಮುಖಂಡರು ಈ ಸಭೆಯಲ್ಲಿ ಭಾಗಿಯಾಗಿದ್ದರು.
ಎಲ್ಲಾ ಮುಖಂಡರ ಅಭಿಪ್ರಾಯ ಆಲಿಸಿದ ಮಾಜಿ ಮುಖ್ಯಮಂತ್ರಿಗಳು, ಮುಖಂಡರಿಗೆ ಕೆಲ ಸ್ಪಷ್ಟ ಸೂಚನೆಗಳನ್ನು ಕೊಟ್ಟಿದ್ದಾರೆ. ನಮ್ಮ ಕಾರ್ಯಕರ್ತರು, ಮುಖಂಡರು ಪಕ್ಷದ ಹಿತರಕ್ಷಣೆ ಬಗ್ಗೆ ಆತಂಕಪಡಬೇಕಾಗಿಲ್ಲ. ಕಹಿಯನ್ನು ಮರೆತು ಕೆಲಸ ಮಾಡೋಣ, ಹಿಂದೆ ಆಗಿರುವ ತಪ್ಪುಗಳನ್ನು ಸರಿ ಮಾಡಿಕೊಂಡು ಮುಂದೆ ಹೋಗೋಣ ಎಂದರು.
ರಾಮನಗರ ಕ್ಷೇತ್ರದ ಜನರು ಯಾವತ್ತೂ ಜಾತಿ ಮೇಲೆ ಚುನಾವಣೆ ಮಾಡಿದವರಲ್ಲ. ನಾನೆಂದೂ ಗುತ್ತಿಗೆದಾರರಿಂದ ಹಣ ಕೇಳಿದವನಲ್ಲ, ಚುನಾವಣೆ ಅದ ಮೇಲೆ ನಾನು ಊರುಗಳಲ್ಲಿ ಜಗಳ ತಂದಿಡಲಿಲ್ಲ. ನಿಮ್ಮಲ್ಲಿ ಒಬ್ಬನಾಗಿ ಪಕ್ಷಕ್ಕೆ ದುಡಿಮೆ ಮಾಡಿದ್ದೇನೆ. ಇವತ್ತು ಕಾಂಗ್ರೆಸ್ ನವರು ಯಾವ ರೀತಿ ನಡೆದುಕೊಳ್ಳುತ್ತಿದ್ದಾರೆ. ನಾನು ಯಾವ ರೀತಿ ನಡೆದುಕೊಂಡಿದ್ದೇನೆ ಎನ್ನುವುದು ರಾಜ್ಯಕ್ಕೆ ಗೊತ್ತಿದೆ ಎಂದು ಮುಖಂಡರಿಗೆ ಮಾಜಿ ಮುಖ್ಯಮಂತ್ರಿಗಳು ತಿಳಿಸಿದರು.