ಬದುಕು ಬದಲಿಸಿದ ಪತಿ ವಿನೋದ್ ಬಾಬುರ ಸಲಹೆ
ಬೆಂಗಳೂರಿನ ಬಿ. ವಿ. ಜಾನ್ಸಿಯವರ ಬಾಲ್ಯ ಬಹುಕಷ್ಟದಲ್ಲಿ ಬನ್ನೇರುಘಟ್ಟದಲ್ಲಿ ಕಳೆದು ಹೋಗಿತ್ತು. ಅವರು ೧೦ ವರ್ಷದ ಬಾಲಕಿಯಾಗಿದ್ದಾಗ, ಲಾರಿ ಚಾಲಕರಾಗಿದ್ದ ಕುಡಿತದ ಚಟ ಬೆಳೆಸಿಕೊಂಡಿದ್ದ ಅವರ ತಂದೆ ತೀರಿಕೊಂಡರು. ಆಗ ಇಡೀ ಸಂಸಾರದ ಜವಾಬ್ದಾರಿ ಅವರ ತಾಯಿಯ ಮೇಲೆ ಬಿತ್ತು. ಹೆಚ್ಚು ಓದದಿದ್ದ ಅವರಿಗೆ ರಾತ್ರಿ ಬೆಳಗಾಗುವುದರೊಳಗೆ ಅಷ್ಟು ದೊಡ್ಡ ಜವಾಬ್ದಾರಿ ಹೊರುವುದು ಅಷ್ಟು ಸುಲಭವಾಗಿರಲಿಲ್ಲ. ಕಾಕತಾಳೀಯವೆಂಬಂತೆ, ಅವರು ಚಿಕ್ಕವರಾಗಿದ್ದಾಗಲೂ ಹೀಗೆಯೇ ಅವರ ತಂದೆ ತೀರಿ ಹೋಗಿ ಅವರ ತಾಯಿಯೂ ಹೀಗೆಯೇ ಸಂಸಾರದ ಭಾರವನ್ನು ಹೊರಬೇಕಾಗಿ ಬಂದಿತ್ತು. ಜಾನ್ಸಿಯವರ ತಾಯಿ ಯಾರ‍್ಯಾರದ್ದೋ ಮನೆಗಳಲ್ಲಿ ಮುಸುರೆ ತಿಕ್ಕಿ, ಕಟ್ಟಡ ಕಟ್ಟುವ ಕೆಲಸ ಮಾಡಿ ಬಹಳ ಕಷ್ಟಪಟ್ಟು ತಿಂಗಳಿಗೆ ಹೆಚ್ಚೆಂದರೆ ೫,೦೦೦ ರೂಪಾಯಿ ಗಳಿಸುತ್ತಿದ್ದರು. ತಾಯಿ ಹೀಗೆ ಒದ್ದಾಡುತ್ತಿದ್ದರೆ ಜಾನ್ಸಿ ತಮ್ಮ ಚಿಕ್ಕಮ್ಮನ ಆಶ್ರಯದಲ್ಲಿ ಬೆಳೆದರು. ಆದರೆ, ತನ್ನ ತಾಯಿ ಪ್ರತಿ ದಿನ ಪಡುತ್ತಿದ್ದ ಕಷ್ಟ ಬಾಲಕಿ ಜಾನ್ಸಿಯ ಮನಸ್ಸಿನಲ್ಲಿ ಎಂದೂ ಮರೆಯದ ಹಾಗೆ ಭದ್ರವಾಗಿ ಅಚ್ಚೊತ್ತಿದ್ದಿತ್ತು. ಯಾವುದೇ ಕಾರಣಕ್ಕೂ ಮುಂದೆ ತನ್ನ ಮಕ್ಕಳು ತಾನು ಬೆಳೆದಂತಹ ಪರಿಸ್ಥಿತಿಯಲ್ಲಿ ಬೆಳೆಯಲು ಬಿಡಲಾರೆ ಎಂದು ಅವರು ಅಂದೇ ಮನಸ್ಸಿನಲ್ಲೇ ನಿರ್ಧರಿಸಿದರು.
ಬಿ. ವಿ. ಜಾನ್ಸಿ ಬೇಗೂರಿನಲ್ಲಿ ಶಾಲಾ ಶಿಕ್ಷಣವನ್ನು ಪಡೆದರು. ಕುಟುಂಬದ ಆರ್ಥಿಕ ಅನನುಕೂಲತೆಯ ಕಾರಣ ಹತ್ತನೇ ತರಗತಿಗಿಂತ ಮುಂದಕ್ಕೆ ಅವರಿಗೆ ಓದಲಾಗಲಿಲ್ಲ. ೨೦೦೮ರಲ್ಲಿ ತನ್ನ ೧೬ನೇ ವಯಸ್ಸಿನ ಪ್ರಾಯದಲ್ಲಿ ತಾಯಿಗೆ ಸಂಸಾರ ದೂಡಲು ನೆರವಾಗುವ ಸಲುವಾಗಿ ಅವರು ಕೆಲಸಕ್ಕೆ ಸೇರಿದರು. ಅವರ ಮೊದಲ ಉದ್ಯೋಗ ಒಂದು ಗಾರ್ಮೆಂಟ್ ಕಾರ್ಖಾನೆಯಲ್ಲಿ ಹೊಲಿಗೆ ಕೆಲಸ. ಅದು ಒಂದು ಗಳಿಗೆಯೂ ಪುರುಸೊತ್ತಿಲ್ಲದ, ಲವಲೇಶವೂ ಸ್ವಾತಂತ್ರ್ಯವಿಲ್ಲದ ಏಕತಾನತೆಯ ಕೆಲಸವಾಗಿತ್ತು. ರಜೆ ಅನ್ನುವುದು ಇಲ್ಲವೇ ಇರಲಿಲ್ಲ. ಬೇರಾವ ದಾರಿಯಿರದ ಕಾರಣ ಜಾನ್ಸಿ ಕೆಲವು ವರ್ಷಗಳ ಕಾಲ ಆ ಕೆಲಸವನ್ನೇ ಮಾಡಬೇಕಾಯಿತು.
೨೦೧೧ರಲ್ಲಿ ಜಾನ್ಸಿಯ ಮದುವೆಯಾಯಿತು. ಅವರ ಗಂಡ ವಿನೋದ್ ಬಾಬು ವೃತ್ತಿಯಲ್ಲಿ ಆಟೋ ಚಾಲಕ. ಕೋವಿಡ್ ಸಮಯದಲ್ಲಿ ಅವರ ಆಟೋ ಆದಾಯ ಹೆಚ್ಚೂ ಕಡಿಮೆ ಸಂಪೂರ್ಣವಾಗಿ ನಿಂತು ಹೋದ ಕಾರಣ, ವಾಹನ ಸಾಲದ ಕಂತು ಕಟ್ಟಲೂ ಪರದಾಡಬೇಕಾಗಿ ಬಂದಿತು. ಆಗ ಜಾನ್ಸಿ ಹೊಲಿಗೆ ಕೆಲಸ ಬಿಟ್ಟು, ಗಂಡನೊಂದಿಗೆ ಒಂದು ಚಹದಂಗಡಿ ಪ್ರಾರಂಭಿಸಿದರು. ಚಹದಂಗಡಿ ವ್ಯವಹಾರ ತಮ್ಮ ಸ್ವಂತದ್ದು ಅನ್ನುವುದನ್ನೊಂದನ್ನು ಬಿಟ್ಟರೆ ಅವರಿಗೆ ಅದರಿಂದ ಬರುತ್ತಿದ್ದ ಆದಾಯ ಹೆಚ್ಚಿರಲಿಲ್ಲ ಹಾಗೂ ಹೆಚ್ಚು ಶ್ರಮವನ್ನೂ ಹಾಕಬೇಕಾಗುತ್ತಿತ್ತು. ಆದರೂ ಹೇಗೋ ಅದನ್ನು ಕೆಲ ಕಾಲ ನಡೆಸಿದರು.
೨೦೧೬ರಲ್ಲಿ ಗಂಡ ನೀಡಿದ ಒಂದು ಸಲಹೆ ಜಾನ್ಸಿಯ ಬದುಕಿನ ದಾರಿಯನ್ನು ಬದಲಾಯಿಸಿತು. ವಿನೋದ್ ಬಾಬು ಜಾನ್ಸಿಗೆ ಆಟೋ ಚಲಾಯಿಸಲು ಸಲಹೆ ನೀಡಿದಾಗ ಜಾನ್ಸಿಗೆ ತಾನು ಆಟೋ ಚಲಾಯಿಸುವ ದೃಶ್ಯವನ್ನು ಊಹಿಸಲೂ ಸಾಧ್ಯವಾಗಲಿಲ್ಲ. ಆದರೆ, ಗಂಡನ ನಿರಂತರ ಒತ್ತಾಯ ಹಾಗೂ ಪ್ರೋತ್ಸಾಹದಿಂದ ಮೊದಮೊದಲು ಹಿಂಜರಿದರೂ, ಆಟೋ ಚಾಲನೆಯನ್ನು ಕಲಿತು, ರಸ್ತೆಗಿಳಿದರು. ಮೊದಲ ದಿನವೇ ೭೦೦ ರೂಪಾಯಿ ಗಳಿಸಿದಾಗ ಅವರಿಗೆ ತಾನು ಈ ಕೆಲಸ ಮಾಡಬಲ್ಲೆ ಎಂಬ ಆತ್ಮವಿಶ್ವಾಸ ಮೂಡಿತು. ೨೦೧೮ರಲ್ಲಿ ಅವರು ಕಮರ್ಷಿಯಲ್ ಡ್ರೈವಿಂಗ್ ಲೈಸನ್ಸ್ ಪಡೆದು, ಉಬರ್‌ಗೆ ಸೇರಿದರು. ಪ್ರಾರಂಭದಲ್ಲಿ ಮನೆಯ ಹತ್ತಿರದಲ್ಲಿ ಆಟೋ ಓಡಿಸಿದರು.
ಜಾನ್ಸಿ ತಮ್ಮ ಮಕ್ಕಳನ್ನು ತಮ್ಮ ಆಟೋದಲ್ಲಿ ಶಾಲೆಗೆ ಬಿಟ್ಟು ಬರುವುದನ್ನು ನೋಡಿದ ಇತರ ಹೆತ್ತವರು ತಮ್ಮ ಮಕ್ಕಳನ್ನೂ ಶಾಲೆಗೆ ಕರೆದುಕೊಂಡು ಹೋಗಿ ಮನೆಗೆ ಕರೆದುಕೊಂಡು ಬರಲು ಕೇಳಿಕೊಂಡರು. ಜಾನ್ಸಿ ಹಲವು ಮಕ್ಕಳನ್ನು ಪ್ರತೀ ದಿನ ಶಾಲೆಗಳಿಗೆ ಪಿಕಪ್ ಮತ್ತು ಡ್ರಾಪ್ ಮಾಡುವ ಕೆಲಸ ಪಡೆದರು. ಬೆಳಿಗ್ಗೆ ೫ ಗಂಟೆಗೆ ಜಾನ್ಸಿಯ ದಿನ ಶುರುವಾಗುತ್ತದೆ. ತನಗೆ, ಮಕ್ಕಳಿಗೆ ಮತ್ತು ಗಂಡನಿಗೆ ಬೆಳಗಿನ ತಿಂಡಿ ತಯಾರಿಸಿ, ಮಕ್ಕಳಿಗೆ ಮಧ್ಯಾಹ್ನದ ಟಿಫಿನ್ ತಯಾರು ಮಾಡುತ್ತಾರೆ. ೭ ಗಂಟೆಗೆ ವಿನೋದ್ ಬಾಬು ಮಕ್ಕಳನ್ನು ಶಾಲೆಗೆ ಬಿಟ್ಟು ಬರುತ್ತಾರೆ. ಅಷ್ಟರಲ್ಲಿ ಜಾನ್ಸಿ ಇತರ ಮನೆಗೆಲಸಗಳನ್ನು ಮುಗಿಸಿ, ೧೦ ಗಂಟೆಗೆ ತಮ್ಮ ಆಟೋದಲ್ಲಿ ರಸ್ತೆಗಿಳಿಯುತ್ತಾರೆ. ಮಧ್ಯಾಹ್ನ ಶಾಲಾ ಮಕ್ಕಳ ಪಿಕಪ್ ಮತ್ತು ಡ್ರಾಪ್ ಕೆಲಸವನ್ನು ಮಾಡಿ, ಸಂಜೆ ೫ ಕ್ಕೆ ಮನೆಗೆ ಮರಳುತ್ತಾರೆ. ಇಷ್ಟೆಲ್ಲ ಮಾಡುವುದು ಎಷ್ಟೇ ಕಷ್ಟವಾದರೂ ಜಾನ್ಸಿ ದುಡಿಯುವ ಸ್ತ್ರೀ ಹಾಗೂ ಮಕ್ಕಳ ತಾಯಿ ಎಂಬ ತಮ್ಮ ಎರಡೂ ಜವಾಬ್ದಾರಿಗಳನ್ನು ಚೆನ್ನಾಗಿ ನಿಭಾಯಿಸುತ್ತಾರೆ.
ಪ್ರಾರಂಭದಲ್ಲಿ ಜಾನ್ಸಿಗೆ ಬೆಂಗಳೂರಿನ ರಸ್ತೆಗಳಲ್ಲಿ ಆಟೋ ಓಡಿಸುವುದು ದೊಡ್ಡ ಸವಾಲಿನ ಕೆಲಸವಾಗಿತ್ತು. ಆದರೆ, ಕಾಲಕ್ರಮೇಣ ಅನುಭವದಿಂದ ಅದರಲ್ಲಿ ಪ್ರಾವೀಣ್ಯತೆ ಗಳಿಸಿದರು. ಹಲವು ವರ್ಷಗಳ ಕಾಲ ಗಾರ್ಮೆಂಟ್ ಕಾರ್ಖಾನೆಯಲ್ಲಿ ಸ್ವಾತಂತ್ರ್ಯವಿಲ್ಲದ ಕೆಲಸ ಮಾಡಿದ ಜಾನ್ಸಿ ಈಗ ಆಟೋ ಓಡಿಸುವ ಮೂಲಕ ತಾನು ಯಾವಾಗ ಕೆಲಸ ಮಾಡಬೇಕು, ಯಾವಾಗ ವಿಶ್ರಾಂತಿ ಪಡೆಯಬೇಕು ಅಂತ ತಾನೇ ನಿರ್ಧರಿಸುವ ಸ್ವಾತಂತ್ರ್ಯ ಪಡೆದರು.
೨೦೨೧ರಲ್ಲಿ ಜಾನ್ಸಿಯ ಬದುಕು ಇನ್ನೊಂದು ತಿರುವನ್ನು ಪಡೆಯಿತು. ಆ ವರ್ಷ ‘ಇಂದಿರಾನಗರ ರೀಜಿನಲ್ ಟ್ರಾನ್ಸ್‌ಪೋರ್ಟ್ ಆಫೀಸ್’ನಲ್ಲಿ ನಡೆದ ಒಂದು ಕಾರ್ಯಕ್ರಮಕ್ಕೆ ಜಾನ್ಸಿ ಆಹ್ವಾನಿಸಲ್ಪಟ್ಟಿದ್ದರು. ಅಲ್ಲಿ ಅವರಂತೆಯೇ ಆಹ್ವಾನಿಸಲ್ಪಟ್ಟಿದ್ದ ಹಲವು ಮಹಿಳೆಯರು ತಮಗೆ ಕೆಲಸ ಮಾಡುವ ಆಸೆಯಿದ್ದರೂ ಸೂಕ್ತ ಮಾರ್ಗದರ್ಶನ ಮತ್ತು ಬೆಂಬಲವಿಲ್ಲದಿರುವುದರ ಬಗ್ಗೆ ತಮ್ಮ ಅಳಲು ತೋಡಿಕೊಂಡರು. ಆಗ ಜಾನ್ಸಿ ಇಂತಹ ಮಹಿಳೆಯರಿಗೆ ತಾನೇಕೆ ಸಹಾಯ ಮಾಡಬಾರದು ಎಂದು ಆಲೋಚಿಸಿ, ಅಂದಿನಿಂದ ಪ್ರತಿದಿನ ತಮ್ಮದೇ ಆಟೋದಲ್ಲಿ ಒಬ್ಬಿಬ್ಬರು ಮಹಿಳೆಯರಿಗೆ ಉಚಿತವಾಗಿ ಆಟೋ ಚಾಲನೆ ಕಲಿಸಲು ಪ್ರಾರಂಭಿಸಿದರು. ಹೀಗೆ ಜಾನ್ಸಿ ಈವರೆಗೆ ಬೆಂಗಳೂರಿನ ಸುಮಾರು ೪೦-೫೦ ಮಹಿಳೆಯರಿಗೆ ಆಟೋ ಚಾಲನೆಯನ್ನು ಕಲಿಸಿ, ಅವರೂ ತನ್ನಂತೆಯೇ ಸ್ವಾಲಂಬನೆಯ ಬದುಕನ್ನು ನಡೆಸಲು ಸಹಾಯ ಮಾಡಿದ್ದಾರೆ. ಆ ಮೂಲಕ ೩೩ ಪ್ರಾಯದ ಜಾನ್ಸಿ ಈಗ ಒಬ್ಬ ತಾಯಿ, ಆಟೋ ಚಾಲಕಿ ಹಾಗೂ ಇತರ ಮಹಿಳೆಯರಿಗೆ ಮಾರ್ಗದರ್ಶಕಿಯಾಗಿ ಸಾರ್ಥಕ ಬದುಕನ್ನು ನಡೆಸುತ್ತಿದ್ದಾರೆ.





