ಇಂದು ( ಫೆಬ್ರವರಿ 1 ) ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮಂಡನೆ ನಡೆಯುತ್ತಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುತ್ತಿದ್ದು ನೂತನ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ಮೊರಾರ್ಜಿ ದೇಸಾಯಿ ಬಳಿಕ ಸತತ ಆರು ಬಾರಿ ಬಜೆಟ್ ಮಂಡಿಸಿದ ದಾಖಲೆಯನ್ನು ನಿರ್ಮಲಾ ಸೀತಾರಾಮನ್ ಮಾಡಿದ್ದಾರೆ. 2019ರಿಂದ 2023ರವರೆಗೆ ಸತತವಾಗಿ ಐದು ಬಾರಿ ವಾರ್ಷಿಕ ಬಜೆಟ್ ಮಂಡನೆ ಮಾಡಿದ್ದ ನಿರ್ಮಲಾ ಸೀತಾರಾಮನ್ ಇಂದು ನಡೆಯುತ್ತಿರುವ ಮಧ್ಯಂತರ ಬಜೆಟ್ ಸೇರಿ ಸತತ ಆರನೇ ಬಾರಿಗೆ ಬಜೆಟ್ ಮಂಡಿಸಿದ್ದಾರೆ.
ಈ ಹಿಂದೆ ಹಣಕಾಸು ಸಚಿವರಾಗಿದ್ದ ಮೊರಾರ್ಜಿ ದೇಸಾಯಿ 1959ರಿಂದ 1964ರವರೆಗೆ ಐದು ವಾರ್ಷಿಕ ಬಜೆಟ್ ಹಾಗೂ ಒಂದು ಮಧ್ಯಂತರ ಬಜೆಟ್ ಮಂಡಿಸಿ ಸತತವಾಗಿ ಅತಿಹೆಚ್ಚು ಬಾರಿ ಬಜೆಟ್ ಮಂಡಿಸಿದ ಫೈನಾನ್ಸ್ ಮಿನಿಸ್ಟರ್ ಎಂಬ ದಾಖಲೆ ಬರೆದಿದ್ದರು. ಈ ದಾಖಲೆಯನ್ನು ಸರಿದೂಗಿಸಿರುವ ನಿರ್ಮಲಾ ಸೀತಾರಾಮನ್ ಐದು ಬಾರಿ ಬಜೆಟ್ ಮಂಡಿಸಿದ್ದ ಮನಮೋಹನ್ ಸಿಂಗ್, ಅರುಣ್ ಜೇಟ್ಲಿ, ಪಿ ಚಿದಂಬರಂ ಹಾಗೂ ಯಶವಂತ್ ಸಿನ್ಹಾ ಅವರನ್ನು ಹಿಂದಿಕ್ಕಿದ್ದಾರೆ.





