ನವದೆಹಲಿ: ಸರಿಯಾದ ಸಮಯಕ್ಕೆ ಮಳೆಬಾರದೇ ರಾಜ್ಯಕ್ಕೆ ಬರಗಾಲ ಆವರಿಸಿದೆ. ಇದರಿಂದ ಕಾವೇರಿ ಕೊಳ್ಳದ ಜನರು ದಿನನಿತ್ಯ ನೀರಿಗಾಗಿ ಪರದಾಡುತಿದ್ದು, ಬೆಂಗಳೂರು ಸೇರಿದಂತೆ ಹಲವೆಡೆ ಕುಡಿಯುವ ನೀರಿಗೂ ಹಾಹಾಕಾರ ಸೃಷ್ಠಿಯಾಗಿದೆ. ಈ ನಡುವೆ ತಮಿಳುನಾಡು ಸರ್ಕಾರ ಮತ್ತೆ ಕಾವೇರಿ ನೀರಿಗಾಗಿ ಖ್ಯಾತೆ ತೆಗೆದಿದೆ.
ಕಳೆದ ವರ್ಷ ಮಳೆ ಕೈ ಕೊಟ್ಟಿದೆ, ಇದರಿಂದ ಕೆಆರ್‌ಎಸ್ ಜಲಾಶಯ ಭರ್ತಿಯಾಗದೇ, ಕಾವೇರಿ ಕೊಳ್ಳದ ಜನತೆ ದಿನನಿತ್ಯ ಮಳೆಗಾಗಿ ಎದುರು ನೋಡುತ್ತಿದ್ದಾರೆ. ಜೊತೆಗೆ ಈ ವರ್ಷದ ಬೇಸಿಗೆಯ ಬಿಸಿಲು ಹೆಚ್ಚಿದೆ. ಕೆಆರ್‌ಎಸ್ ನಲ್ಲಿ ಇದ್ದ ನೀರು ಬೇಸಿಗೆಯ ಬಿಸಿಲಿಗೆ ತತ್ತರಿಸಿದೆ. ಈ ನಡುವೆ ಮೂರು ತಿಂಗಳ ಬಾಕಿ ಇರುವ ನೀರನ್ನು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಸೂಚಿಸುವಂತೆ ಕಾವೇರಿ ನೀರು ನಿರ್ವಾಹಣಾ ಪ್ರಾಧಿಕಾರ (ಕೆಡಬ್ಲ್ಯುಎಂಎ) ಸಭೆಯಲ್ಲಿ ತಮಿಳುನಾಡು ಆಗ್ರಹಿಸಿದೆ.
ಬಾಕಿ ಉಳಿದಿರುವ 10 ಟಿಎಂಸಿ ನೀರನ್ನು ಬಿಡುಗಡೆ ಮಾಡಲು ಕರ್ನಾಟಕಕ್ಕೆ ಸೂಚಿಸುವಂತೆ ತಮಿಳುನಾಡು ಸರ್ಕಾರ ಸಭೆಯಲ್ಲಿ ಒತ್ತಾಯಿಸಿದೆ. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಕರ್ನಾಟಕದ ಅಧಿಕಾರಿಗಳು, ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯ ಇದೆ. ಹೀಗಾಗಿ ನೀರು ಬೇಕಾಗಿರುವುದರಿಂದ ನೀರು ಪೂರೈಕೆ ಸಾಧ್ಯವಿಲ್ಲ ಎಂದು ವಾದ ಮಂಡಿಸಿದೆ.