ನವದೆಹಲಿ : ವಿವಿಧ ಮೂಲಗಳಿಂದ ಉತ್ಪಾದನೆಗೊಳ್ಳುವ ವಿದ್ಯುತ್ ಮೇಲೆ ತೆರಿಗೆ, ಸುಂಕ ಸೇರಂದಂತೆ ಯಾವುದೇ ಹೆಚ್ಚುವರಿ ಕಂದಾಯ ವಿಧಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಕೇಂದ್ರ ಇಂಧನ ಸಚಿವಾಲಯ ಅಕ್ಟೋಬರ್ 25ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ರಾಜ್ಯ ಸರ್ಕಾರವು ಯಾವುದೇ ತೆರಿಗೆ ವಿಧಿಸಬಾರದೆಂದು ತಾಕೀತು ಮಾಡಲಾಗಿದೆ. ರಾಜ್ಯಗಳ ವ್ಯಾಪ್ತಿಯಲ್ಲಿ ಉತ್ಪಾದನೆಗೊಳ್ಳುವ ವಿದ್ಯುತ್ ಅನ್ನು ಅನ್ಯ ರಾಜ್ಯಗಳಿಗೆ ಮಾರಾಟ ಅಥವಾ ಸರಬರಾಜು ಮಾಡುವ ವೇಳೆ ಹಚ್ಚುವರಿ ತೆರಿಗೆ ವಿಧಿಸುತ್ತಿರುವುದು ಕೇಂದ್ರ ಸರ್ಕಾರದ ಗಮನಕ್ಕೆ ಬಂದಿದೆ.
ಈ ರೀತಿ ತೆರಿಗೆ ವಿಸುವುದು ಕಾನೂನು ಬಾಹಿರ ಮತ್ತು ಅಸಂವಿಧಾನಿಕವಾಗಿದೆ ಎಂದು ತಿಳಿಯಲಾಗಿದೆ. ಉಷ್ಣ, ಜಲ, ಪವನ, ಸೌರ, ಅಣು ಸೇರಿದಂತೆ ಹಲವು ಮಾದರಿಗಳಲ್ಲಿ ಉತ್ಪಾದನೆಯಾಗುವ ವಿದ್ಯುತ್ ಅನ್ನು ಬೇರೆ ರಾಜ್ಯಗಳಿಗೆ ಮಾರಾಟ ಮಾಡುವಾಗ ಸೆಸ್, ಲೇವಿ ಟ್ಯಾಕ್ಸ್, ಶುಲ್ಕ , ಸುಂಕ, ಹೆಚ್ಚುವರಿ ತೆರಿಗೆ ಸೇವಾ ತೆರಿಗೆ ಸೇರಿದಂತೆ ವಿವಿಧ ಮಾದರಿಯಲ್ಲಿ ದರ ನಿಗದಿ ಮಾಡಿರುವುದು ಕಂಡು ಬಂದಿದೆ.
ಕೇಂದ್ರ ವಿದ್ಯುತ್ ಕಾಯಿದೆಯ ಪರಿಚ್ಛೇದ 7ರ ಪ್ರಕಾರ ಈ ರೀತಿ ತೆರಿಗೆ ವಿಧಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇಲ್ಲವೆಂದು ತಿಳಿಸಿದೆ. ಸಂವಿಧಾನದ ಕಲಂ -286ನ್ನು ಕೂಡ ಉಲ್ಲೇಖಿಸಿದ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸರಕು ಮತ್ತು ಸೇವಾ ತೆರಿಗೆಯನ್ನು ಪರಿಷ್ಕರಣೆ ಮಾಡಲು ಅವಕಾಶ ಇಲ್ಲ. ಹೊರ ರಾಜ್ಯಗಳಿಗೆ ಸರಬರಾಜು ಮಾಡಲು ಮತ್ತು ನಿಗತ ಶುಲ್ಕ ವಸೂಲಿಗೆ ಅವಕಾಶ ಇದೆ.
ಕೇಂದ್ರದ ಘಟಕಗಳಿಂದ ಉತ್ಪಾದನೆಯಾಗುವ ವಿದ್ಯುತನ್ನು ಖರೀದಿಸುವ ರಾಜ್ಯ ಸರ್ಕಾರಗಳು ಅದನ್ನು ಮರಳಿ ಅನ್ಯ ರಾಜ್ಯಗಳಿಗೆ ಪೂರೈಸುವ ವೇಳೆ ಹೆಚ್ಚುವರಿ ತೆರಿಗೆ ವಿಸುತ್ತಿರುವುದು ಕಂಡು ಬಂದಿದೆ. ಇಂದಿನ ದಿನಗಳಲ್ಲಿ ಈ ರೀತಿಯ ನಡವಳಿಕೆಗಳನ್ನು ಪುನರಾವರ್ತಿಸಬಾರೆಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.