Mysore
19
few clouds

Social Media

ಶನಿವಾರ, 31 ಜನವರಿ 2026
Light
Dark

ಹೆತ್ತ ಮಗನನ್ನೇ ಕೊಲೆಗೈದು ಸೂಟ್‌ಕೇಸ್‌ನಲ್ಲಿಟ್ಟ ತಾಯಿ!

ತಾಯಿಯೊಬ್ಬಳು 4 ವರ್ಷ ವಯಸ್ಸಿನ ಹೆತ್ತ ಮಗನನ್ನೇ ಕೊಂದು ಆತನ ಶವವನ್ನು ಸೂಟ್‌ಕೇಸ್‌ನಲ್ಲಿ ಸಾಗಿಸಲು ಯತ್ನಿಸಿದ ಅಮಾನವೀಯ ಘಟನೆಯೊಂದು ನಡೆದಿದೆ. ಬೆಂಗಳೂರಿನಲ್ಲಿ ನೆಲೆಸಿದ್ದ ಸ್ಟಾರ್ಟ್‌ಅಪ್‌ ಕಂಪನಿ ಸಿಇಒ ಸುಚನಾ ಸೇಠ್‌ ಈ ಕೊಲೆಯನ್ನು ಮಾಡಿದ್ದಾರೆ.

ಮೂಲತಃ ಪಶ್ಚಿಮ ಬಂಗಾಳದ ಸುಚನಾ 2009ರಲ್ಲಿ ಬೆಂಗಳೂರಿಗೆ ಬಂದು ನೆಲೆಸಿ ಸ್ಟಾರ್ಟ್‌ಅಪ್‌ ಆರಂಭಿಸಿದ್ದಾರೆ. ತಮಿಳುನಾಡು ಮೂಲದ ಟೆಕ್ಕಿ ವೆಂಕಟರಮಣ ಜತೆ ಸುಚನಾ 2010ರಲ್ಲಿ ವಿವಾಹವಾಗಿದ್ದಾರೆ. ಈ ದಂಪತಿಗೆ 2019ರಲ್ಲಿ ಒಂದು ಗಂಡು ಮಗು ಸಹ ಜನಿಸಿದ್ದು, 2020ರಲ್ಲಿ ವಿವಾಹ ವಿಚ್ಛೇದನ ಪಡೆದುಕೊಂಡಿದ್ದರು.

ಹೀಗೆ ಗಂಡನಿಂದ ದೂರಾಗಿ ಮೂರ್ನಾಲ್ಕು ವರ್ಷ ಕಳೆದ ನಂತರ ಇದೀಗ ಸುಚನಾ ತನ್ನ ಮಗುವನ್ನು ತಾನೇ ಗೋವಾದ ಹೊಟೇಲ್‌ವೊಂದರಲ್ಲಿ ಕೊಂದು ಆತನ ದೇಹವನ್ನು ಸೂಟ್‌ಕೇಸ್‌ ಮೂಲಕ ಸಾಗಿಸಲು ಮುಂದಾಗಿದ್ದಾರೆ. ಹೊಟೇಲ್‌ವೊಂದರಲ್ಲಿ ಮಗನ ಜತೆ ತಂಗಿದ್ದ ಸುಚನಾ ಚೆಕ್‌ಔಟ್‌ ಆಗುವಾಗ ಮಗು ಇಲ್ಲದೇ ತೆರಳುವುದನ್ನು ನೋಡಿದ ಹೊಟೇಲ್‌ ಸಿಬ್ಬಂದಿ ನಿಮ್ಮ ಜತೆ ಬಂದಿದ್ದ ಮಗು ಎಲ್ಲಿ ಎಂದು ಕೇಳಿದ್ದಾರೆ. ಇದಕ್ಕುತ್ತರಿಸಿದ ಸುಚನಾ ಮಗುವನ್ನು ತನ್ನ ಸಂಬಂಧಿಕರ ಜತೆ ಕಳುಹಿಸಿದ್ದೇನೆ ಎಂದು ಹೇಳಿ ಟ್ಯಾಕ್ಸಿ ಹತ್ತಿ ಅಲ್ಲಿಂದ ಹೊರಟಿದ್ದಾಳೆ.

ಆದರೆ ಅನುಮಾನಗೊಂಡ ಹೊಟೇಲ್‌ ಸಿಬ್ಬಂದಿ ಸುಚನಾ ಇದ್ದ ರೂಮಿಗೆ ತೆರಳಿ ರಕ್ತದ ಕಲೆಗಳನ್ನು ಕಂಡು ಕೂಡಲೇ ಗೋವಾ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಪೊಲೀಸರು ಸುಚನಾ ನಂಬರ್‌ ಟ್ರ್ಯಾಕ್‌ ಮಾಡಿ, ಆಕೆ ಪಯಣಿಸುತ್ತಿದ್ದ ಕಾರ್‌ ಡ್ರೈವರ್‌ನ ನಂಬರ್‌ ಸಂಗ್ರಹಿಸಿ ಕರೆ ಮಾಡಿ ಮುಂದೆ ಬರುವ ಠಾಣೆಯಲ್ಲಿ ಕಾರು ನಿಲ್ಲಿಸುವಂತೆ ಹೇಳಿದ್ದಾರೆ. ಅದರಂತೆ ಚಾಲಕ ಐಮಂಗಲ ಪೊಲೀಸ್ ಠಾಣೆಯಲ್ಲಿ ಕಾರು ನಿಲ್ಲಿಸಿದ್ದು ಸುಚನಾರನ್ನು ಪೊಲೀಸರು ಬಂಧಿಸಿದರು ಹಾಗೂ ಸೂಟ್‌ಕೇಸ್‌ನಲ್ಲಿದ್ದ ಮಗುವಿನ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.

ಇನ್ನು ವಿವಾಹ ವಿಚ್ಛೇದನವಾದ ಬಳಿಕ ಕೋರ್ಟ್‌ ಭಾನುವಾರದಂದು ಮಗುವಿನ ತಂದೆ ಮಗುವನ್ನು ನೋಡಬಹುದು, ಭೇಟಿಯಾಗಬಹುದು ಎಂದು ತೀರ್ಮಾನವನ್ನು ಮಾಡಿತ್ತು. ಅದರೆ ಕೋರ್ಟ್‌ನ ಈ ನಿರ್ಧಾರ ಸುಚನಾಗೆ ಇಷ್ಟವಿರಲಿಲ್ಲ. ಈ ಉದ್ದೇಶದಿಂದಲೇ ತನ್ನ ಮಗುವನ್ನೇ ಸುಚನಾ ಕೊಲೆ ಮಾಡಿದ್ದಾರೆ ಎನ್ನಲಾಗುತ್ತಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!