ನವದೆಹಲಿ : ಕೇಂದ್ರ ಸರಕಾರ ಫಾಸ್ಫೇಟ್ ಮತ್ತು ಪೊಟ್ಯಾಷಿಯಂ (ಪಿ ಆ್ಯಂಡ್ ಕೆ) ರಸಗೊಬ್ಬರಗಳಿಗೆ 22,303 ಕೋಟಿ ರೂ. ಸಬ್ಸಿಡಿ ಮಂಜೂರಿಗೆ ಬುಧವಾರ ಅನುಮೋದನೆ ನೀಡಿದೆ.
“ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಸಗೊಬ್ಬರ ದರ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಬದಲಾವಣೆ ಇಲ್ಲದೇ ಸಬ್ಸಿಡಿ ದರ ನೀತಿ ಮುಂದುವರಿಸಲಾಗಿದೆ,” ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದರು. ಹಿಂಗಾರಿಗೆ ಪೂರಕವಾಗಿ ಅಕ್ಟೋಬರ್ 1ರಿಂದ ಮಾರ್ಚ್ 31ರ ತನಕ ಈ ಸಬ್ಸಿಡಿ ಅನ್ವಯವಾಗಲಿದೆ.
ಇದೇ ವೇಳೆ ಡಿಎಪಿ ರಸಗೊಬ್ಬರ ಪ್ರತಿ ಟನ್‌ಗೆ 4,500 ರೂ. ಮತ್ತು ಎನ್‌ಪಿಕೆ ರಸಗೊಬ್ಬರ ಪ್ರತಿ ಬ್ಯಾಗ್‌ಗೆ 1,470 ರೂ.ಗಳಿಗೆ ಲಭ್ಯವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ. 25 ದರ್ಜೆಗಳ ಪಿ ಆ್ಯಂಡ್ ಕೆ ರಸಗೊಬ್ಬರಗಳನ್ನು ತಯಾರಕರು ಮತ್ತು ಆಮದುದಾರರ ಮೂಲಕ ರೈತರಿಗೆ ಸಬ್ಸಿಡಿ ದರದಲ್ಲಿ ಒದಗಿಸಲಾಗುವುದೆಂದು ಕೇಂದ್ರ ಸರಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಯಾವ ಗೊಬ್ಬರಕ್ಕೆ ಎಷ್ಟು ಸಬ್ಸಿಡಿ?
ಕ್ರ. ಸಂ. | ರಸಗೊಬ್ಬರ | ಸಬ್ಸಿಡಿ (ಪ್ರತಿ ಕೆ.ಜಿಗೆ) |
1 | ನೈಟ್ರೋಜನ್ | 47.2 ರೂ. |
2 | ಫಾಸ್ಫರಸ್ | 20.82 ರೂ. |
3 | ಪೊಟ್ಯಾಶ್ | 2.38 ರೂ. |
4 | ಸಲ್ಫರ್ | 1.89 ರೂ. |
ಆದರೆ, ಸಂಪುಟ ಸಭೆಯು ಈ ಬಾರಿ ಅನುಮೋದನೆ ನೀಡಿದ ಅನುದಾನದಲ್ಲಿ ಭಾರೀ ಇಳಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸಬ್ಸಿಡಿಯಲ್ಲಿ ಶೇ. 57ರಷ್ಟು ಕಡಿತ ಮಾಡಲಾಗಿದೆ. 2022-23ನೇ ಸಾಲಿನಲ್ಲಿ ಖಾರಿಫ್ ಮತ್ತು ರಾಬಿ ಸೀಸನ್‌ಗಳಿಗೆ ಒಟ್ಟು 1.12 ಲಕ್ಷ ಕೋಟಿ ರೂ. ಸಬ್ಸಿಡಿ ಬಿಡುಗಡೆ ಮಾಡಲಾಗಿದ್ದರೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಯೂರಿಯೇತರ ರಸಗೊಬ್ಬರಗಳ ಸಬ್ಸಿಡಿ ಶೇ. 46 ರಷ್ಟು ಕಡಿಮೆಯಾಗಿ 60,303 ಕೋಟಿ ರೂ.ಗೆ ಇಳಿದಿದೆ.
ಅಕ್ಟೋಬರ್ 1ರಿಂದ ಪ್ರತಿ ಕೆಜಿ ನೈಟ್ರೋಜನ್‌ಗೆ 47.02 ರೂ., ಫಾಸ್ಪರಸ್‌ಗೆ 20.82 ರೂ., ಪೊಟ್ಯಾಶ್‌ಗೆ 2.38 ರೂ. ಮತ್ತು ಸಲ್ಫರ್‌ಗೆ 1.89 ರೂ. ಸಬ್ಸಿಡಿ ನೀಡಲು ಸಂಪುಟ ಅನುಮೋದನೆ ನೀಡಿದೆ. ಕಳೆದ ಆರ್ಥಿಕ ವರ್ಷದಲ್ಲಿ ನೈಟ್ರೋಜನ್‌ಗೆ ಕೆಜಿಗೆ 98.2 ರೂ., ಫಾಸ್ಪರಸ್‌ಗೆ 66.93 ರೂ., ಪೊಟ್ಯಾಶ್‌ಗೆ 23.65 ರೂ. ಮತ್ತು ಸಲ್ಫರ್‌ಗೆ ಕೆಜಿಗೆ 6.12 ರೂ. ಸಹಾಯಧನ ಮಂಜೂರಾಗಿತ್ತು.