ಒಂದು ರಾಷ್ಟ್ರ ಒಂದು ಚುನಾವಣೆ ಕುರಿತಂತೆ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿಯನ್ನು ಕಳೆದ ಸೆಪ್ಟೆಂಬರ್‌ನಲ್ಲಿ ರಚಿಸಲಾಗಿತ್ತು. ಈ ಸಮಿತಿ ಒಂದು ರಾಷ್ಟ್ರ ಒಂದು ಚುನಾವಣೆ ಬಗ್ಗೆ ರಾಜಕೀಯ ಪಕ್ಷಗಳ ಅಭಿಪ್ರಾಯವೇನು ಎಂಬುದನ್ನು ವಿವಿಧ ರಾಜಕೀಯ ಪಕ್ಷಗಳಿಗೆ ಪತ್ರ ಬರೆಯುವ ಮೂಲಕ ಸಂಗ್ರಹ ಮಾಡಿತ್ತು.
ಇದೀಗ ಅದೇ ರೀತಿ ಈ ಕುರಿತು ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹ ಮಾಡಲು ಸಮಿತಿ ಮುಂದಾಗಿದೆ. ಈ ಕುರಿತು ಇದೀಗ ಸಾರ್ವಜನಿಕ ಪ್ರಕಟಣೆಯನ್ನು ಹೊರಡಿಸುವ ಮೂಲಕ ಸಾರ್ವಜನಿಕ ಸಲಹೆಗಳನ್ನು ಆಹ್ವಾನಿಸಿದೆ. ಜನವರಿ 15ರೊಳಗೆ ಸಾರ್ವಜನಿಕರು ಸಲಹೆಗಳನ್ನು ಕಳುಹಿಸಬೇಕು, ಅಂತಹ ಸಲಹೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದೆ. ಸಾರ್ವಜನಿಕರು ತಮ್ಮ ಸಲಹೆಗಳನ್ನು onee.gov.in ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಬಹುದು ಅಥವಾ sc-hlc@gov.inಗೆ ಇಮೇಲ್ ಕಳುಹಿಸಿಕೊಡಬಹುದು ಎಂದು ನೋಟಿಸ್‌ನಲ್ಲಿ ತಿಳಿಸಿದೆ.