ಮುಂದಿನ ಸೋಮವಾರ ( ಜನವರಿ 22 ) ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠೆ ಕಾರ್ಯ ನಡೆಯಲಿದ್ದು, ಕ್ಷಣಗಣನೆ ಆರಂಭಗೊಂಡಿದೆ. ಇನ್ನು ಪ್ರಾಣ ಪ್ರತಿಷ್ಠೆಗೆ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ ವಿಗ್ರಹ ಆಯ್ಕೆಯಾಗಿದ್ದು, ಈ ವಿಗ್ರಹ ಸದ್ಯ ರಾಮಮಂದಿರದ ಗರ್ಭಗೃಹವನ್ನು ತಲುಪಿದೆ.
ಬಿಗಿ ಪೊಲೀಸ್ ಭದ್ರತೆಯೊಂದಿಗೆ 51 ಇಂಚಿನ, 150 ಕೆಜಿ ತೂಕದ ವಿಗ್ರಹವನ್ನು ರಾಮಮಂದಿರಕ್ಕೆ ತಲುಪಿಸಲಾಗಿದ್ದು, ವಿಗ್ರಹವನ್ನು ಗರ್ಭಗೃಹದಲ್ಲಿ ಇರಿಸಲಾದ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಗ್ರಹವನ್ನು ಬಿಳಿ ಬಟ್ಟೆಯಿಂದ ಸುತ್ತಲಾಗಿದ್ದು, ಸೋಮವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಗರ್ಭಗುಡಿಯಲ್ಲಿ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಿದ್ದಾರೆ.