ಮುಂಬೈ : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ 17,840 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗಿರುವ ಅಟಲ್ ಬಿಹಾರಿ ವಾಜಪೇಯಿ ಸೇವಾರಿ – ನವ ಶೇವಾ ‘ಅಟಲ್ ಸೇತು’ ವನ್ನು ಪ್ರಧಾನಿ ನರೇಂದ್ರ ಮೋದಿ ಇಂದು (ಶುಕ್ರವಾರ) ಲೋಕಾರ್ಪಣೆಗೊಳಿಸಿದರು.
ಮೋದಿ ಅವರು 2016ರ ಡಿಸೆಂಬರ್ ತಿಂಗಳಿನಲ್ಲಿ ಈ ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಇದು ಭಾರತದ ಅತಿ ಉದ್ದದ ಸಮುದ್ರ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಅಟಲ್ ಸೇತು ಸುಮಾರು 21.8 ಕಿಮೀ ಉದ್ದದ ಆರು-ಪಥದ ಸೇತುವೆಯಾಗಿದ್ದು, 5.5 ಕಿಮೀ ಭೂಮಿಯ ಮೇಲೆ ಮತ್ತು 16.5 ಕಿಮೀ ಸಮುದ್ರದ ಮೇಲೆ ಇದನ್ನು ನಿರ್ಮಿಸಲಾಗಿದೆ.
ಇದು ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನವಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವೇಗದ ಸಂಪರ್ಕವನ್ನು ಒದಗಿಸುತ್ತದೆ. ಮುಂಬೈನಿಂದ ಪುಣೆ, ಗೋವಾ ಮತ್ತು ದಕ್ಷಿಣ ಭಾರತಕ್ಕೆ ಪ್ರಯಾಣದ ಸಮಯವನ್ನು ತಗ್ಗಿಸುತ್ತದೆ. ಜತೆಗೆ ಮುಂಬೈ ಬಂದರು ಮತ್ತು ಜವಾಹರಲಾಲ್ ನೆಹರು ಬಂದರು ನಡುವಿನ ಸಂಪರ್ಕವನ್ನು ಸುಧಾರಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮಖ್ಯಮಂತ್ರಿ ಏಕನಾಥ್ ಶಿಂಧೆ, ಉಪ ಮುಖ್ಯಮಂತ್ರಿಗಳಾದ ದೇವೇಂದ್ರ ಫಡಣವೀಸ್, ಅಜಿತ್ ಪವಾರ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
27ನೇ ರಾಷ್ಟ್ರೀಯ ಯುವದಿನ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಹಾರಾಷ್ಟ್ರದಲ್ಲಿ 30,500 ಕೋಟಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.





