ಸಂಸತ್ ಭವನದ ಮೇಲೆ ದಾಳಿ ನಡೆದ ಬೆನ್ನಲ್ಲೇ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ಸಂಸದರ ನಡುವೆ ಸದನದಲ್ಲಿ ಕಿತ್ತಾಟ ಶುರುವಾಗಿದೆ. ಪ್ರತಿಪಕ್ಷದ ಸಂಸದರು ಆರೋಪಿಗಳು ಸಂಸತ್ ಪ್ರವೇಶಿಸಲು ಪಾಸ್ ನೀಡಿದ ಪ್ರತಾಪ್ ಸಿಂಹ ಅವರೂ ಸಹ ಅಪರಾಧಿಯೇ, ಅವರನ್ನೂ ಸಹ ತನಿಖೆ ಮಾಡಿ ಎಂದು ಆರೋಪಿಸಿ ಭದ್ರತಾ ಲೋಪದ ವಿರುದ್ಧ ಪ್ರತಿಭಟನೆ ನಡೆಸಿದ್ದು, ಪರಿಣಾಮ ಇಲ್ಲಿಯವರೆಗೆ ಒಟ್ಟು 143 ಸಂಸದರ ಅಮಾನತಾಗಿದೆ.
ಇನ್ನು ಅಮಾನತಾದ ಸಂಸದರ ಪೈಕಿ ಕೆಲವರು ಸಂಸತ್ತಿನ ಮುಂಭಾಗದಲ್ಲಿ ನಿಂತು ಪ್ರತಿಭಟಿಸಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರಲ್ಲಿ ತೃಣಮೂಲ ಕಾಂಗ್ರೆಸ್‌ನ ಸಂಸದ ಕಲ್ಯಾಣ್ ಬ್ಯಾನರ್ಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಅಣುಕು ಮಾಡಿದ್ದರು.
ಈ ಕುರಿತು ಚರ್ಚೆಗಳು ಆರಂಭವಾಗಿದ್ದು, ಉಪರಾಷ್ಟ್ರಪತಿಗಳಿಗೆ ಹಲವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಸಾಂತ್ವನ ಹೇಳಿದ್ದಾರೆ. ಇದೀಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಹ ಈ ಘಟನೆ ಸಂಬಂಧ ಉಪರಾಷ್ಟ್ರಪತಿಗೆ ಕರೆ ಮಾಡುವ ಮೂಲಕ ಸಾಂತ್ವನ ಹೇಳಿದ್ದಾರೆ. ಈ ಕುರಿತು ಸ್ವತಃ ಜಗದೀಪ್ ಧನಕರ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು “ಪ್ರಧಾನಿ ನರೇಂದ್ರ ಮೋದಿ ಅವರಿಂದ ದೂರವಾಣಿ ಕರೆ ಸ್ವೀಕರಿಸಿದೆ. ಸಂಸತ್ ಆವರಣದಲ್ಲಿ ನಿನ್ನೆ ಹಲವು ಗೌರವಾನ್ವಿತ ಸಂಸದರು ಮಾಡಿದ ಅಣಕಿನ ಬಗ್ಗೆ ಪ್ರಧಾನಿಗಳು ನೋವನ್ನು ವ್ಯಕ್ತಪಡಿಸಿದರು. ಇಂತಹ ಅವಮಾನಗಳನ್ನು ನಾನು ಇಪ್ಪತ್ತು ವರ್ಷಗಳಿಂದ ಪಡೆದುಕೊಳ್ಳುತ್ತಾ ಬಂದಿದ್ದೇನೆ ಎಂದೂ ಸಹ ಅವರು ಹೇಳಿದ್ರು” ಎಂದು ಬರೆದುಕೊಂಡಿದ್ದಾರೆ.





