ಚೆನ್ನೈ: ಹಣ ಹಂಚಿಕೆ, ಅಭಿವೃದ್ಧಿ ಯೋಜನೆಗಳು ಮತ್ತು ರಾಜ್ಯದಲ್ಲಿ ನೀಟ್ ಅನ್ನು ನಿಷೇಧಿಸುವ ವಿಷಯದಲ್ಲಿ ತಮಿಳುನಾಡಿನ ವಿರುದ್ಧ ಕೇಂದ್ರ ತಾರತಮ್ಯ ಮಾಡಿದೆ. ಚುನಾವಣೆ ಹತ್ತಿರವಿರುವಾಗ ಮಾತ್ರ ಪ್ರಧಾನಿ ತಮಿಳುನಾಡಿಗೆ ಭೇಟಿ ನೀಡುತ್ತಿದ್ದಾರೆ ಎಂದು ಸಚಿವ ಉದಯ್‌ನಿಧಿ ಸ್ಟಾಲಿನ್ ಹೇಳಿದ್ದಾರೆ.
ಶನಿವಾರ(ಮಾ.23) ರಾಮನಾಥಪುರಂ ಮತ್ತು ಥೇಣಿಯಲ್ಲಿ ಪ್ರತ್ಯೇಕ ರ್‍ಯಾಲಿಗಳಲ್ಲಿ ಬಿಜೆಪಿ ನೇತೃತ್ವದ ಕೇಂದ್ರದ ನಿಧಿ ಹಂಚಿಕೆಯ ತಾರತಮ್ಯದ ವಿರುದ್ಧ ಉದಯನಿಧಿ ಸ್ಟಾಲಿನ್ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯವು ತೆರಿಗೆಯಾಗಿ ಪಾವತಿಸುವ ಪ್ರತಿ ರೂಪಾಯಿಗೆ ಕೇವಲ 28 ಪೈಸೆಗಳನ್ನು ಮಾತ್ರ ಕೇಂದ್ರ ರಾಜ್ಯಕ್ಕೆ ಪಾವತಿಸಿದೆ. ಬಿಜೆಪಿ ಆಡಳಿತದ ರಾಜ್ಯಗಳು ಇದಕ್ಕಿಂತ ಹೆಚ್ಚು ಹಣವನ್ನು ಪಡೆಯುತ್ತಿವೆ ಎಂದು ಆರೋಪಿಸಿರುವ ಅವರು, ಇನ್ಮುಂದೆ ನಾವು ಪ್ರಧಾನಿಯನ್ನು 28 ಪೈಸೆ ಪಿಎಂ ಎಂದು ಕರೆಯಬೇಕೆಂದು ವ್ಯಂಗ್ಯವಾಡಿದ್ದಾರೆ.
ತಮಿಳುನಾಡಿನಲ್ಲಿ ಒಟ್ಟು 39 ಲೋಕಸಭಾ ಕ್ಷೇತ್ರಗಳನ್ನು ಹೊಂದಿದ್ದು, ಎಲ್ಲಾ ಕ್ಷೇತ್ರಗಳಿಗೂ ಏಪ್ರಿಲ್ 19 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಜೂನ್ 4 ರಂದು ತೀರ್ಪು ಬರಲಿದೆ.





