ಡಿ.13ರಂದು ನಡೆದ ಸಂಸತ್ ಭದ್ರತಾ ಉಲ್ಲಂಘನೆ ಪ್ರಕರಣದ ಎಲ್ಲಾ ಆರು ಆರೋಪಿಗಳ ಪಾಲಿಗ್ರಾಫ್ ಪರೀಕ್ಷೆ ನಡೆಸಲು ದೆಹಲಿ ಪೊಲೀಸರು ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ಪಾಟಿಯಾಲ ಹೌಸ್ ಕೋರ್ಟ್ ಜನವರಿ 5ಕ್ಕೆ ಮುಂದೂಡಿದೆ.
ಪಾಲಿಗ್ರಾಫ್ ಪರೀಕ್ಷೆಯನ್ನು ಸಾಮಾನ್ಯವಾಗಿ ಸುಳ್ಳು ಪತ್ತೆ ಹಚ್ಚುವ ಪರೀಕ್ಷೆ ಎಂದೂ ಸಹ ಕರೆಯಲಾಗುತ್ತದೆ. ಆರೋಪಿಯ ವಿಚಾರಣೆ ಸಂದರ್ಭದಲ್ಲಿ ಕೇಳಲಾಗುವ ಸರಣಿ ಪ್ರಶ್ನೆಗಳಿಗೆ ಆತ ಉತ್ತರಿಸುವಾಗ ಆತನ ರಕ್ತದೊತ್ತಡ, ನಾಡಿಮಿಡಿತ ಮತ್ತು ಉಸಿರಾಟದ ಪ್ರಮಾಣವನ್ನು ದಾಖಲಿಸಲಾಗುತ್ತದೆ.
ಬಂಧಿತ ಆರೋಪಿಗಳಾದ ಮನೋರಂಜನ್, ಸಾಗರ್ ಶರ್ಮಾ, ಅಮೋಲ್ ಶಿಂಧೆ, ನೀಲಮ್ ದೇವಿ, ಲಲಿತ್ ಝಾ ಹಾಗೂ ಮಹೇಶ್ ಕುಮಾವತ್ ಅವರನ್ನು ದೆಹಲಿ ಪೊಲೀಸರು ಡಿಸೆಂಬರ್ 16ರಿಂದ ವ್ಯಾಪಕವಾಗಿ ವಿಚಾರಣೆ ನಡೆಸುತ್ತಾ ಬಂದಿದ್ದು, ಆರೋಪಿಗಳು ಪೊಲೀಸರಿಗೆ ಹೆಚ್ಚೇನೂ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಹೀಗೆ ತಮ್ಮ ಪ್ರಶ್ನೆಗಳಿಗೆ ಉತ್ತರ ಸಿಗದ ಕಾರಣ ಪೊಲೀಸರು ಎಲ್ಲಾ ಆರೋಪಿಗಳನ್ನು ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಬೇಕೆಂದು ಅರ್ಜಿ ಸಲ್ಲಿಸಿದೆ.
ಈ ಅರ್ಜಿಯನ್ನು ಕೈಗೆತ್ತಿಕೊಂಡ ಪಾಟಿಯಾಲ ಹೌಸ್ ಕೋರ್ಟ್‌ನ ಹೆಚ್ಚುವರಿ ಸೆಷನ್ ಕೋರ್ಟ್‌ನ ನ್ಯಾಯಾಧೀಶ ಹರ್ದೀಪ್ ಕೌರ್ ವಿಚಾರಣೆಯನ್ನು ಜನವರಿ 5ಕ್ಕೆ ಮುಂದೂಡಿದರು. ಅಲ್ಲದೇ ನೀಲಂ ದೇವಿಯ ಜಾಮೀನು ಅರ್ಜಿಯ ಕುರಿತು ಜನವರಿ 10ರೊಳಗೆ ಪ್ರತಿಕ್ರಿಯೆ ನೀಡುವಂತೆ ಸೂಚನೆ ನೀಡಿದ್ದಾರೆ.





