ಹೊಸದಿಲ್ಲಿ: ಸಂಸತ್‌ನಲ್ಲಿ ಚಳಿಗಾಲದ ಅಧಿವೇಶನ ಇಂದಿನಿಂದ ಶುರುವಾಗಿದ್ದು, ವಿಪಕ್ಷಗಳ ಗದ್ದಲ ಕೋಲಾಹಲದಿಂದ ನವೆಂಬರ್ 27ಕ್ಕೆ ಸದನ ಮುಂದೂಡಿಕೆ ಮಾಡಲಾಗಿದೆ.
ಲೋಕಸಭೆಯಲ್ಲಿ ಇಂದು(ನ.25) ವಿರಾಮದ ನಂತರ 12 ಗಂಟೆಗೆ ಸದನ ಸೇರಿದ ಪ್ರತಿಪಕ್ಷದ ಸದಸ್ಯರು ಉತ್ತರ ಪ್ರದೇಶದ ಸಂಭಲ್‌ನಲ್ಲಿ ಸಂಭವಿಸಿದ ಹಿಂಸಾಚಾರವನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು. ಅಲ್ಲದೇ ಅಮೆರಿಕಾ ನ್ಯಾಯಾಲಯದಲ್ಲಿ ಉದ್ಯಮಿ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಈ ಹಿನ್ನೆಲೆ ಲೋಕಸಭೆಯಲ್ಲಿ ಉಂಟಾದ ಗದ್ದಲಕ್ಕೆ ಕಾರಣವಾಗಿರುವುದರಿಂದ ಲೋಕಸಭೆ ಸಭಾಪತಿ ನವೆಂಬರ್ 27ಕ್ಕೆ ಮುಂದೂಡಿಕೆ ಮಾಡಿದ್ದಾರೆ.
ಲೋಕಸಭೆಯಲ್ಲಿ ಚಳಿಗಾಲದ ಅಧಿವೇಶನ ಇಂದಿನಿಂದ ಪ್ರಾರಂಭವಾಗಿದ್ದು, ಸದನದಲ್ಲಿ ಪಶ್ಚಿಮ ಬಂಗಾಳದ ಬಸಿರ್ಹತ್ ಕ್ಷೇತ್ರದಿಂದ ಎಸ್ಕೆ ನೂರುಲ್ ಇಸ್ಲಾಂ ಹಾಗೂ ಮಹಾರಾಷ್ಟ್ರದ ನಾಂದೇಡ್ ಕ್ಷೇತ್ರದಿಂದ ಸದನಕ್ಕೆ ಚುನಾಯಿತರಾಗಿದ್ದ ವಸಂತರಾವ್ ಚವಾಣ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.