ನವದೆಹಲಿ: ಕೆನಡಾದಲ್ಲಿ ನೆಲೆಸಿರುವ ಭಾರತೀಯ ಮೂಲದ ಗ್ಯಾಂಗ್‌ಸ್ಟರ್ ಸತೀಂದರ್‌ಜಿತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್‌ನನ್ನು ಭಯೋತ್ಪಾದಕ ಎಂದು ಸೋಮವಾರ ಕೇಂದ್ರ ಸರಕಾರ ಘೋಷಿಸಿದೆ.
1967ರ ಕಾನೂನುಬಾಹಿರ ಚುಟುವಟಿಕೆ ತಡೆ ಕಾಯಿದೆಯಡಿ ಗೋಲ್ಡಿ ಬ್ರಾರ್‌ನನ್ನು ಉಗ್ರ ಎಂದು ಘೋಷಿಸಲಾಗಿದೆ.
ಗೋಲ್ಡಿ ಬ್ರಾರ್ ನಿಷೇಧಿತ ಖಲಿಸ್ತಾನಿ ಸಂಘಟನೆ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್ ಜೊತೆ ನಿಕಟ ಸಂಪರ್ಕ ಹೊಂದಿರುವ ಭಯೋತ್ಪಾದಕ ಸಂಘಟನೆಗಳ ಬೆಂಬಲ ಹೊಂದಿರುವ ಗೋಲ್ಡಿ ಬ್ರಾರ್ ಉಗ್ರವಾದದ ಪ್ರತಿಪಾದಕನಾಗಿದ್ದಾನೆ ಎಂದು ಕೇಂದ್ರ ಗೃಹ ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಿದೆ.
ರಾಜಕಾರಣಿಗಳ ಅಪಹರಣ, ಬೆದರಿಕೆ, ಹತ್ಯೆ, ಸುಲಿಗೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಈತನ ಕೈವಾಡವಿದೆ. ಗ್ರೆನೇಡ್ ಸೇರಿದಂತೆ ಮದ್ದು ಗುಂಡುಗಳ ಕಳ್ಳ ಸಾಗಣೆ, ಶಾರ್ಪ್‌ಶೂಟರ್‌ಗಳಿಗೆ ಶಸ್ತ್ರಾಸ್ತ್ರಗಳ ಪೂರೈಕೆ ಮತ್ತಿತರ ಕುಕೃತ್ಯಗಳಲ್ಲಿ ಈತ ಭಾಗಿಯಾಗಿದ್ದಾನೆ ಎಂದು ಕೇಂದ್ರ ಸರ್ಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಗೋಲ್ಡಿ ಬ್ರಾರ್ ಹಾಗೂ ಆತನ ಸಹಚರರು ದೇಶ ವಿರೋಧಿ ಚಟುವಟಿಕೆಗಳ ಮೂಲಕ ಪಂಜಾಬ್‌ನಲ್ಲಿ ಶಾಂತಿ, ಕೋಮು ಸೌಹಾರ್ದತೆ ಕದಡುವುದು, ಕಾನೂನು ಸುವ್ಯವಸ್ಥೆ ಹಾಳುಗೆಡುವಲ್ಲಿ ಪಿತೂರಿ ನಡೆಸಿದ್ದಾರೆ,” ಎಂದು ಗೃಹ ಸಚಿವಾಲಯ ಹೇಳಿದೆ.
ಪಂಜಾಬ್‌ನ ಮುಕ್ತಸರ್ ಸಾಹಿಬ್ ಗೋಲ್ಡಿ ಬ್ರಾರ್‌ನ ಹುಟ್ಟೂರು. ಮತ್ತೊಬ್ಬ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಜತೆ ನಿಕಟ ಸಂಪರ್ಕ ಹೊಂದಿದ್ದಾನೆ. ಮಾನ್ಸಾ ಜಿಲ್ಲೆಯಲ್ಲಿ ಗಾಯಕ ಸಿಧು ಮೂಸೆವಾಲಾ ಹತ್ಯೆಯ ನಂತರ 2022ರ ಜೂನ್‌ನಲ್ಲಿ ಗೋಲ್ಡಿ ಬ್ರಾರ್ ಹಸ್ತಾಂತರಕ್ಕಾಗಿ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಹೊರಡಿಸಿತ್ತು.





