ರಾಯಪುರ : ಕೇಂದ್ರದ ಉಚಿತ ಪಡಿತರ ಯೋಜನೆಯನ್ನು ಇನ್ನೂ 5 ವರ್ಷಗಳವರೆಗೆ ವಿಸ್ತರಿಸಲಾಗುವುದು. ದೇಶದ 80 ಕೋಟಿ ಜನರು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಛತ್ತೀಸ್‌ಗಢದ ದುರ್ಗ್‌ನಲ್ಲಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, ದೇಶದ 80 ಕೋಟಿ ಬಡವರಿಗೆ ಉಚಿತ ಪಡಿತರ ಒದಗಿಸುವ ಯೋಜನೆಯನ್ನು ಕೇಂದ್ರ ಬಿಜೆಪಿ ಸರ್ಕಾರ ಮುಂದಿನ 5 ವರ್ಷಗಳವರೆಗೆ ವಿಸ್ತರಿಸಲಿದೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಯಾವಾಗಲೂ ನಮಗೆ ಪವಿತ್ರ ನಿರ್ಧಾರಗಳನ್ನು ತೆಗೆದುಕೊಳ್ಳಲು ಶಕ್ತಿ ನೀಡುತ್ತದೆ ಎಂದು ಹೇಳಿದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ, ಕಾಂಗ್ರೆಸ್ ಭ್ರಷ್ಟಾಚಾರದ ಮೂಲಕ ಬಡವರನ್ನು ವಂಚಿಸಿದ್ದು ಬಿಟ್ಟರೆ ಏನನ್ನೂ ನೀಡಿಲ್ಲ. ಕಾಂಗ್ರೆಸ್ ಎಂದಿಗೂ ಬಡವರನ್ನು ಗೌರವಿಸುವುದಿಲ್ಲ. ಅವರಿಗೆ ಬಡವರ ನೋವು, ಸಂಕಟ ಅರ್ಥವಾಗುವುದಿಲ್ಲ. ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಬಡವರ ಹಕ್ಕನ್ನು ಲೂಟಿ ಮಾಡಿ ತಿನ್ನುತ್ತಿತ್ತು. 2014ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಮ್ಮ ಸಹೋದರ, ಸಹೋದರಿಯರಿಗೆ ಬಡತನ ತೊಡೆದು ಹಾಕುವ ಭರವಸೆ ಮೂಡಿಸಲಾಯಿತು ಎಂದರು.
ಚತ್ತೀಸ್ ಗಢದ ಕಾಂಗ್ರೆಸ್ ಸರ್ಕಾರ ಅನ್ಯಾಯ ಮತ್ತು ಭ್ರಷ್ಟಾಚಾರವನ್ನು ಸ್ವಲ್ಪ ದಿನ ತಡೆದುಕೊಳ್ಳಿ. ನನ್ನನ್ನು ನಂಬಿ, ಇನ್ನು 30 ದಿನದಲ್ಲಿ ನೀವು ಈ ಸಮಸ್ಯೆಗಳಿಂದ ಹೊರ ಬರುತ್ತೀರಿ. ಕಾಂಗ್ರೆಸ್ ಹೈಕಮಾಂಡ್ ನಿಮ್ಮ ಹಿಂದುಳಿದ ವರ್ಗ ಮುಖ್ಯಮಂತ್ರಿ ಮತ್ತು ವರ್ಗವನ್ನು ಅವಮಾನಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.





