ತೆಲಂಗಾಣ : ತೆಲಂಗಾಣ ವಿಧಾನಸಭಾ ಚುನಾವಣೆ ಫಲಿತಾಂಶಕ್ಕೂ ಮುನ್ನವೇ ಕಾಂಗ್ರೆಸ್ ನಾಯಕ ರೇವಂತ್ ರೆಡ್ಡಿ ಅವರನ್ನು ಭೇಟಿಯಾದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದ ಮಾಜಿ ಡಿಜಿಪಿ ಅಂಜನಿ ಕುಮಾರ್ ಅವರ ಅಮಾನತು ಆದೇಶವನ್ನು ಚುನಾವಣಾ ಆಯೋಗ ಹಿಂಪಡೆದಿದೆ.
ತೆಲಂಗಾಣ ಚುನಾವಣೆಯ ಮತ ಎಣಿಕೆ ಸಂದರ್ಭದಲ್ಲಿ ಅಧಿಕೃತವಾಗಿ ಫಲಿತಾಂಶ ಇನ್ನೂ ಹೊರಬಂದಿರಲಿಲ್ಲ. ಅಷ್ಟರೊಳಗೆ ಡಿಜಪಿ ಅಂಜನಿ ಕುಮಾರ್ ಅವರು ರೆಡ್ಡಿಯವರನ್ನು ಭೇಟಿಯಾಗಿ, ಹೂಗುಚ್ಚ ನೀಡಿ ಅಭಿನಂದನೆ ಸಲ್ಲಿಸಿದ್ದರು. ರೇವಂತ್ ರೆಡ್ಡಿ ಭೇಟಿ ವಿಚಾರವಾಗಿ ಅಂಜನಿ ಕುಮಾರ್ ಅವರಿಂದ ವಿವರಣೆ ಕೇಳಿರುವ ಚುನಾವಣಾ ಆಯೋಗ ಅವರನ್ನು ಅಮಾನತುಗೊಳಿಸಿತ್ತು. ಮತ್ತು ಅವರ ಸ್ಥಾನಕ್ಕೆ ರವಿ ಗುಪ್ತಾ ಅವರನ್ನು ಡಿಜಿಪಿಯಾಗಿ ನೇಮಿಸಿತ್ತು.
ಇನ್ನು ಮುಂದೆ ಇಂತಹ ಪ್ರಮಾದ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ಅಂಜನಿಕುಮಾರ್ ವಿವರಿಸಿದರು. ಅವರ ವಿವರಣೆಗೆ ತೃಪ್ತಿ ವ್ಯಕ್ತಪಡಿಸಿದ ಚುನಾವಣಾ ಆಯೋಗ, ಅಮಾನತು ಆದೇಶವನ್ನು ಹಿಂಪಡೆದಿದೆ.
ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ 119 ಸ್ಥಾನಗಳ ಪೈಕಿ ಕಾಂಗ್ರೆಸ್ 64, ಬಿಆರ್‌ಎಸ್ 39 ಬಿಜೆಪಿ 9, ಎಐಎಂಐಎಂ 7 ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ 1 ಸ್ಥಾನವನ್ನು ಗೆದ್ದಿದೆ.
ಇದೀಗ ಕಾಂಗ್ರೆಸ್ನ ರೇವಂತ್ ರೆಡ್ಡಿ ತೆಲಂಗಾಣದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.