ಬೆಂಗಳೂರು: ಪಕ್ಷದ ಚೌಕಟ್ಟು ಮೀರದಿರಿ, ಶಿಸ್ತು ಉಲ್ಲಂಘಿಸಿದರೆ ಹಾಗೂ ಪಕ್ಷದ ಆಂತರಿಕ ವಿಚಾರಗಳನ್ನು ಬಾಹ್ಯವಾಗಿ ಚರ್ಚೆ ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರೆಬೆಲ್ ಶಾಸಕರಿಗೆ ಹಾಗೂ ಸಚಿವರಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಎಚ್ಚರಿಕೆ ನೀಡಿದರು.
ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ತುರ್ತು ಸಭೆಯ ಬಳಿಕ ಮಾತನಾಡಿದ ಅವರು, ” ಶಾಸಕರು ಸಚುವರು ತಮ್ಮ ಇಲಾಖೆ, ಕ್ಷೇತ್ರ ಹಾಗೂ ಅಭಿವೃದ್ಧಿ ಕೆಲಸ ಕಾರ್ಯಗಳತ್ತ ಗಮನ ಹರಿಸಲಿ, ಬದಲಾಗಿ ಪಕ್ಷದ ಚೌಕಟ್ಟು ಉಲ್ಲಂಘನೆ ಮಾಡಿ ಹೇಳಿಕೆಗಳನ್ನು ನೀಡಬಾರದು ” ಎಂದು ಎಚ್ಚರಿಕೆ ನೀಡಿದರು.
ಏನೇ ಸಮಸ್ಯೆಯ ಇದ್ದರೂ ಹೈಕಮಾಂಡ್ ಸಂಪರ್ಕಿಸಿ
” ಏನೇ ಸಮಸ್ಯೆ ಇದ್ದರೂ ನನ್ನನ್ನು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರನ್ನು ಸಂಪರ್ಕ ಮಾಡಬಹುದು. ಬದಲಾಗಿ ಬಹಿರಂಗ ಹೇಳಿಕೆ ನೀಡುವ ಹಾಗಿಲ್ಲ. ಶಾಸಕರು ತಮ್ಮ ಕ್ಷೇತ್ರದ ಅಭಿವೃದ್ಧಿ ಕೆಲಸಗಳತ್ತ ಗಮನ ಹರಿಸಬೇಕು. ಅಭಿವೃದ್ಧಿ ವಿಚಾರವಾಗಿ ಅವರು ಹೆಚ್ಚು ಆದ್ಯತೆ ಕೊಡಲಿ.ಸಿಎಂ ಬದಲಾವಣೆ ವಿಚಾರವಾಗಿಯೂ ಯಾವುದೇ ಹೇಳಿಕೆ ನೀಡುವ ಹಾಗಿಲ್ಲ ” ಎಂದು ಎಚ್ಚರಿಸಿದರು.
15 ದಿನಗಳಲ್ಲಿ ಕಾಂಗ್ರೆಸ್ ಸಂಭಾವ್ಯರ ಪಟ್ಟಿ
ಕಾಂಗ್ರೆಸ್ ಗ್ಯಾರಂಟಿ ಯೋಜನೆ ಲೋಕಸಭೆ ಚುನಾವಣೆಯಲ್ಲಿ ಜಯ ತಂದುಕೊಡಲಿದೆ. 15 ದಿನಗಳಲ್ಲಿ ಸಂಭಾವ್ಯ ಅಭ್ಯರ್ಥಿಗಳ ಹೆಸರು ಪಟ್ಟಿ ಮಾಡಲು ಸೂಚನೆ ನೀಡಲಾಗಿದೆ. ಈ ಬಾರಿ ಲೋಕಸಭೆಯಲ್ಲಿ 20 ಸ್ಥಾನ ಖಂಡಿತಾ ಗೆಲ್ಲುತ್ತೇವೆ ಹಾಗೂ 25+ ಪ್ರಯತ್ನ ಪಡುವ ಭರವಸೆಯನ್ನು ಸಿಎಂ ಹಾಗೂ ಡಿಸಿಎಂ ನೀಡಿದ್ದಾರೆ ಎಂದರು.
ನಿಗಮ ಮಂಡಳಿ ಬಗ್ಗೆ ಚರ್ಚೆ
ಇಂದಿನ ಸಭೆಯಲ್ಲಿ ನಿಗಮ ಮಂಡಳಿ ಮತ್ತು ಕಾರ್ಪೊರೇಷನ್ ನೇಮಕಾತಿಯ ಬಗ್ಗೆಯೂ ಚರ್ಚೆ ನಡೆದಿದೆ. ನೇಮಕಾತಿಯಲ್ಲಿ ಶಾಸಕರು ಹಾಗೂ ಕಾರ್ಯಕರ್ತರನ್ನೂ ಪರಿಗಣಿಸಲಾಗುವುದು.ಮಧ್ಯ ಪ್ರದೇಶ ಚುನಾವಣೆಯ ಬಳಿಕ ಮತ್ತೆ ಈ ನಿಟ್ಟಿನಲ್ಲಿ ಚರ್ಚೆ ನಡೆಸುತ್ತೇವೆ ಎಂದರು.
ಮಧ್ಯಪ್ರದೇಶ ಚುನಾವಣೆ ಬಳಿಕ ನಿಗಮಮಂಡಳಿ ನೇಮಕಾತಿ
” ಇನ್ನು ನಿಗಮ ಮಂಡಳಿಗಳ ನೇಮಕ ಬಗ್ಗೆ ಇಂದು ಚರ್ಚೆ ಮಾಡಲಾಯಿತು. ಈ ವಿಚಾರವಾಗಿ ಇನ್ನು ನಾಲ್ಕೈದು ಸುತ್ತಿನ ಚರ್ಚೆ ನಡೆಯಬೇಕಿದೆ. ಸದ್ಯ ನನಗೆ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯ ಜವಾಬ್ದಾರಿ ವಹಿಸಿದ್ದು, ಇದೇ ತಿಂಗಳು 17 ರಂದು ಚುನಾವಣೆ ಪೂರ್ಣಗೊಂಡ ತಕ್ಷಣವೇ ನಾನು ಕರ್ನಾಟಕಕ್ಕೆ ಆಗಮಿಸಿ ನಿಗಮಮಂಡಳಿ ನೇಮಕ ಪ್ರಕ್ರಿಯೆ ಪೂರ್ಣಗೊಳಿಸುತ್ತೇವೆ ಎಂದು ” ಹೇಳಿದರು.
ಯುವಕರು, ಹೊಸಬರಿಗೆ ಸಂಘಟನೆಯ ಜವಾಬ್ದಾರಿ
ಪಕ್ಷದ ಸಂಘಟನೆ ಬದಲಾವಣೆ ವಿಚಾರವಾಗಿ ಕೇಳಿದ ಪ್ರಶ್ನೆ ಉತ್ತರಿಸಿದ ಅವರು, “ ಈ ವಿಚಾರವಾಗಿ ಚರ್ಚೆ ನಡೆಯುತ್ತಿದೆ. ಈ ವಿಚಾರವನ್ನು ಎಐಸಿಸಿ ಅಧ್ಯಕ್ಷರ ಗಮನಕ್ಕೆ ತರಲಾಗುವುದು. ಹಾಲಿ ಪದಾಧಿಕಾರಿಗಳ ಪೈಕಿ ಹಲವರು ಶಾಸಕರು, ಸಚಿವರುಗಳಾಗಿದ್ದಾರೆ. ಅವರಿಗೆ ಸಂಘಟನಾ ಜವಾಬ್ದಾರಿಯಿಂದ ಬಿಡುಗಡೆ ಮಾಡಬೇಕಿದೆ. ಯುವಕರು, ಹೊಸಬರಿಗೆ ಸಂಘಟನೆಯ ಜವಾಬ್ದಾರಿ ನೀಡಲು ಚಿಂತನೆ ನಡೆಸಲಾಗುತ್ತಿದೆ” ಎಂದು ತಿಳಿಸಿದರು.