ನವದೆಹಲಿ: ತೆರಿಗೆ ಹಣ ಹಂಚಿಕೆ ವಿಚಾರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಆರೋಪ – ಪ್ರತ್ಯಾರೋಪಗಳು ನಡೆಯುತ್ತಲೇ ಇವೆ. ಕೇಂದ್ರ ಸರ್ಕಾರದಿಂದ ತೆರಿಗೆ ಅನುದಾನ ಬಂದಿಲ್ಲ ಎಂದು ಆರೋಪಿಸಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದು, ಇದೀಗ ಎಐಸಿಸಿ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ಸರ್ಕಾರದ ವಿರುದ್ಧ ಕಪ್ಪು ಪತ್ರ ಬಿಡುಗಡೆಗೊಳಿಸಿದ್ದಾರೆ.
ಬಜೆಟ್ ಅಧಿವೇಶನದಲ್ಲಿ ತಮ್ಮ ಸರ್ಕಾರದ ಹತ್ತು ವರ್ಷಗಳ ಅವಧಿಯ ಸಾಧನೆಗಳನ್ನು ಕಾಂಗ್ರೆಸ್ ಸರ್ಕಾರದ ಹತ್ತು ವರ್ಷಗಳ ಆಡಳಿತಾವಧಿಯಲ್ಲಾದ ಸಾಧನೆಗಳ ಜತೆ ಹೋಲಿಸಿ ಶ್ವೇತ ಪತ್ರ ಬಿಡುಗಡೆ ಮಾಡುವುದಾಗಿ ಬಿಜೆಪಿ ತಿಳಿಸಿತ್ತು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕಪ್ಪು ಪತ್ರವನ್ನು ಬಿಡುಗಡೆ ಮಾಡಿದ್ದಾರೆ.
ʼಹತ್ತು ವರ್ಷಗಳ ಅನ್ಯಾಯ ಕಾಲʼ ಎಂಬ ಹೆಸರಿನ ಅಡಿಯಲ್ಲಿ ಕಪ್ಪು ಪತ್ರವನ್ನು ಬಿಡುಗಡೆ ಮಾಡಿದ ಮಲ್ಲಿಕಾರ್ಜುನ ಖರ್ಗೆ ʼಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸಹಾಯ ಮಾಡುತ್ತಿಲ್ಲ. ಅನುದಾನ ಬಿಡುಗಡೆ ಮಾಡಿದರೂ ಅದನ್ನು ರಾಜ್ಯಗಳು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಆರೋಪಿಸುತ್ತಿದೆʼ ಎಂದು ಕಪ್ಪು ಪತ್ರ ಬಿಡುಗಡೆ ವೇಳೆ ಖರ್ಗೆ ಹೇಳಿದರು.
ಶ್ವೇತಪತ್ರ ಬಿಡುಗಡೆ ಮಾಡುವುದರ ಕುರಿತು ಮಾತನಾಡಿದ ಖರ್ಗೆ ಸದ್ಯ ಹಣದುಬ್ಬರ ಹೆಚ್ಚಳವಾಗಿದೆ. ಕಾಂಗ್ರೆಸ್ ಇತಿಹಾಸ ಕೆದಕುವುದರಿಂದ ಏನೂ ಪ್ರಯೋಜನವಿಲ್ಲ ಎಂದು ಹೇಳಿದರು.