ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಲೋಕಸಭೆಯ ಕೊನೆಯ ಭಾಷಣದಲ್ಲಿ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಕುರಿತು ಡಿಕೆ ಸುರೇಶ್ ನೀಡಿದ್ದ ಹೇಳಿಕೆಯನ್ನು ಪ್ರಸ್ತಾಪಿಸಿ, ಈಗ ಬಹಿರಂಗವಾಗಿ ದೇಶ ಒಡೆಯುವ ಬಗ್ಗೆ ಮಾತನಾಡುತ್ತಿದ್ದಾರೆ. ಒಗ್ಗೂಡಿಸುವುದು ಇರಲಿ. ಒಡೆಯುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಲೋಕಸಭೆಯಲ್ಲಿ ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಮೋದಿ, ಇನ್ನೂ ಭಾರತ ದೇಶವನ್ನು ಎಷ್ಟು ತುಂಡು ಗಳನ್ನಾಗಿ ಮಾಡುತ್ತಿರಾ? ಇಷ್ಟು ಒಡೆದಿರುವುದು ಸಾಕಾಗಿಲ್ವಾ. ದೇಶವನ್ನು ಇನ್ನೆಷ್ಟು ತುಂಡು ಮಾಡಬೇಕು ಅಂದುಕೊಂಡಿದ್ದೀರಿ. ಕಾಂಗ್ರೆಸ್ನವರು ಎಂದೂ ಕೂಡ ದೇಶವನ್ನು ಜೋಡಿಸಿಲ್ಲ. ಜವಾಹರಲಾಲ್ ನೆಹರು ತಪ್ಪಿನಿಂದ ಕಾಶ್ಮೀರ ಸಮಸ್ಯೆ ಸೃಷ್ಟಿಯಾಯಿತು. ನೆಹರು ಹೊರಟು ಹೋದ್ರು, ಆದ್ರೆ ದೇಶ ನೋವು ಅನುಭವಿಸುತ್ತಿದೆ. ಇಂದು ನಾವು ಜಮ್ಮು-ಕಾಶ್ಮೀರ ಅಭಿವೃದ್ಧಿ ಮಾಡಿದ್ದೇವೆ ಎಂದರು.
ರಾಜ್ಯಕ್ಕೆ ತೆರಿಗೆ ಪಾಲಿನಲ್ಲಿ ಅನ್ಯಾಯವಾಗುತ್ತಿದೆ. ದಕ್ಷಿಣದ ರಾಜ್ಯಗಳಿಗೆ ತಾರತಮ್ಯ ಆಗುತ್ತಿದೆ ಎಂದು ಡಿಕೆ ಸುರೇಶ್ ಹೇಳಿದ್ದರು. ಈ ಹೇಳಿಕೆ ಬೆನ್ನಲ್ಲೇ ರಾಜ್ಯಾದ್ಯಂತ ಬಿಜೆಪಿ ಪಕ್ಷದವರು ಹೇಳಿಕೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ಡಿಕೆ ಸುರೇಶ್ ಅವರ ಮನೆಗು ಮುತ್ತಿಗೆ ಹಾಕಲು ಯತ್ನಿಸಿದ್ದರು. ಇದೀಗ ಪಿಎಂ ಮೋದಿ ತಮ್ಮ ಭಾಷಣದ ವೇಳೆ ಈ ಪ್ರತ್ಯೇಕ ದೇಶ ಹೇಳಿಕೆಯನ್ನು ಪ್ರಸ್ತಾಪಿಸಿದ್ದು ಅದನ್ನೇ ಇಟ್ಟುಕೊಂಡು ಇದೀಗ ರಾಜ್ಯ ಕಾಂಗ್ರೆಸ್ ನಾಯಕರು ಇದೇ ಫೆಬ್ರವರಿ 7 ರಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ.





