Mysore
20
overcast clouds
Light
Dark

ಜಾರ್ಖಂಡ್‌ ನೂತನ ಸಿಎಂ ಆಗಿ ಚಂಪೈ ಸೊರೇನ್‌ ಪ್ರಮಾಣವಚನ ಸ್ವೀಕಾರ

ರಾಂಚಿ: ಜಾರ್ಖಂಡ್‌ನ ನೂತನ ಮುಖ್ಯಮಂತ್ರಿಯಾಗಿ ಜಾರ್ಖಂಡ್ ಮುಕ್ತಿ ಮೋರ್ಚಾದ ಹಿರಿಯ ನಾಯಕ ಚಂಪೈ ಸೊರೇನ್ ಇಂದು (ಶುಕ್ರವಾರ) ಪ್ರಮಾಣ ವಚನ ಸ್ವೀಕರಿಸಿದರು.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಎಂ ಹೇಮಂತ್ ಸೊರೇನ್ ಅವರನ್ನು ಬಂಧಿಸಲಾಗಿದೆ. ಹೀಗಾಗಿ ರಾಜ್ಯದ ಸಿಎಂ ಆಗುವಂತೆ ಚಂಪೈ ಅವರಿಗೆ ಆಹ್ವಾನ ನೀಡಿದ್ದರು. ಅದರಂತೆ 67 ವಯಸ್ಸಿನ ಚಂಪೈ ಮಧ್ಯಾಹ್ನ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಜಾರ್ಖಂಡ್‌ನ ಆಡಳಿತಾರೂಢ ಜೆಎಂಎಂ-ಕಾಂಗ್ರೆಸ್-ಆರ್‌ಜೆಡಿ ಮೈತ್ರಿಕೂಟವು 81 ಸದಸ್ಯರ ವಿಧಾನಸಭೆಯಲ್ಲಿ 47 ಶಾಸಕರನ್ನು ಹೊಂದಿದೆ. ಬಹುಮತಕ್ಕೆ 41 ಸ್ಥಾನಗಳ ಅಗತ್ಯವಿದೆ. ಪ್ರಸ್ತುತ 43 ಶಾಸಕರು ಚಂಪೈ ಸೊರೇನ್ ಅವರನ್ನು ಬೆಂಬಲಿಸಿದ್ದರು.

ಬಿಜೆಪಿ 25 ಶಾಸಕರನ್ನು ಹೊಂದಿದೆ. AJSU ಅಥವಾ ಆಲ್ ಜಾರ್ಖಂಡ್ ವಿದ್ಯಾರ್ಥಿ ಒಕ್ಕೂಟವು ಮೂವರು ಶಾಸಕರನ್ನು ಹೊಂದಿದೆ. ಎನ್‌ಸಿಪಿ ಮತ್ತು ಎಡಪಕ್ಷಗಳು ತಲಾ ಒಂದು ಹಾಗೂ ಮೂವರು ಪಕ್ಷೇತರ ಶಾಸಕರು ಇದ್ದಾರೆ.

ಬುಧವಾರ ಸಂಜೆ ರಾಜ್ಯಪಾಲರನ್ನು ಭೇಟಿಯಾಗಿ ಉನ್ನತ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ನಂತರ ಜಾರಿ ನಿರ್ದೇಶನಾಲಯವು ಹೇಮಂತ್ ಸೊರೇನ್ ಅವರನ್ನು ಬಂಧಿಸಿದೆ. ಅವರು 600 ಕೋಟಿ ರೂ. ಭೂ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ