2007ರಲ್ಲಿ ನಡೆದ ಚೊಚ್ಚಲ ಟಿ 20 ವಿಶ್ವಕಪ್ ಟೂರ್ನಿಯಲ್ಲಿ ಎಂಎಸ್ ಧೋನಿ ನಾಯಕತ್ವದ ಟೀಮ್ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ ಗೆದ್ದು ಬೀಗಿತ್ತು. ಈ ಪಂದ್ಯದಲ್ಲಿ ಕೊನೆಯ ಓವರ್ ಎಸೆದು ಉತ್ತಮ ಪ್ರದರ್ಶನ ನೀಡಿದ್ದ ಜೋಗಿಂದರ್ ಶರ್ಮಾ ಸ್ಟಾರ್ ಎನಿಸಿಕೊಂಡಿದ್ದರು.
ಹೀಗೆ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಮಿಂಚಿದ್ದ ಜೋಗಿಂದರ್ ಶರ್ಮಾ ಬಳಿಕ ಹರಿಯಾಣದಲ್ಲಿ ಡಿ ಎಸ್ ಪಿಯಾಗಿ ಸೇವೆ ಆರಂಭಿಸಿದ್ದರು. ಸದ್ಯ ಇದೇ ಜೋಗಿಂದರ್ ಶರ್ಮಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.
ಜನವರಿ 1ರಂದು ಹಿಸ್ಸಾರ್ ಜಿಲ್ಲೆಯ ದಬ್ಡಾ ಗ್ರಾಮದಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಆತ್ಮಹತ್ಯೆಗೆ 7 ಜನರು ನೀಡುತ್ತಿದ್ದ ಕಿರುಕುಳವೇ ಕಾರಣ ಎಂದು ಕುಟುಂಬಸ್ಥರು ಜೋಗಿಂದರ್ ಶರ್ಮಾ ಹಾಗೂ ಇನ್ನೂ 6 ಮಂದಿ ವಿರುದ್ಧ ದೂರು ನೀಡಿದೆ.