ನವದೆಹಲಿ: ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್‌ಗೆ ಬಿಗ್ ರಿಲೀಫ್ ಸಿಕ್ಕಿದೆ. 3.500 ಕೋಟಿ ರೂಪಾಯಿಗೂ ಅಧಿಕ ತೆರಿಗೆ ಬಾಕಿ ವಿಚಾರದಲ್ಲಿ ವಿರೋಧ ಪಕ್ಷಗಳ ಮೇಲೆ ಸದ್ಯಕ್ಕೆ ಕ್ರಮ ಕೈಗೊಳ್ಳುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆ ನಿನ್ನೆ(ಏಪ್ರಿಲ್ 1) ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಕಾಂಗ್ರೆಸ್ ಪಕ್ಷಕ್ಕೆ ಆದಾಯ ತೆರಿಗೆ ಇಲಾಖೆ ಕಳುಹಿಸಿದ ನೋಟಿಸ್ ಪ್ರಶ್ನಿಸಿ ಪಕ್ಷ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಬಿವಿ ನಾಗರತ್ನ ಮತ್ತು ನ್ಯಾಯಮೂರ್ತಿ ಆಗಸ್ಟಿನ್ ಜಾರ್ಜ್ ಮಸಿಹ್ ನೇತೃತ್ವದ ಉನ್ನತ ನ್ಯಾಯಾಲಯದ ಪೀಠ ಸೋಮವಾರ ನಡೆಸಿದೆ. 1,823 ಕೋಟಿ ದಂಡದ ಜೊತೆಗೆ ಇನ್ನೂ ಎರಡು ನೋಟಿಸ್‌ಗಳನ್ನು ಪಡೆದಿದ್ದೇವೆ ಎಂದು ಕಾಂಗ್ರೆಸ್ ಹೇಳಿದ ಎರಡು ದಿನಗಳ ನಂತರ ವಿಚಾರಣೆ ನಡೆದಿದೆ.
ವಿಚಾರಣೆಯ ಸಂದರ್ಭದಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ನಾನು ಈ ವಿಷಯದಲ್ಲಿ ಹೇಳಿಕೆ ನೀಡಲು ಬಯಸುತ್ತೇನೆ. ಕಾಂಗ್ರೆಸ್ ಒಂದು ರಾಜಕೀಯ ಪಕ್ಷವಾಗಿದ್ದು, ಚುನಾವಣೆಗಳು ನಡೆಯುತ್ತಿರುವುದರಿಂದ ನಾವು ಪಕ್ಷದ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಲು ಹೋಗುವುದಿಲ್ಲ ಎಂದಿದ್ದಾರೆ. ಇದಲ್ಲದೆ, ಲೋಕಸಭೆ ಚುನಾವಣೆ ಮುಗಿಯುವವರೆಗೆ ಐಟಿ ಇಲಾಖೆ ಏನನ್ನೂ ವಸೂಲಿ ಮಾಡುವುದಿಲ್ಲ ಎಂದು ಐಟಿ ಹೇಳಿರುವುದಾಗಿ ಕೇಂದ್ರ ಹೇಳಿದೆ.
ಈ ಪ್ರಕರಣ ಸಂಬಂಧ ಮುಂದಿನ ವಿಚಾರಣೆಯನ್ನು ಜುಲೈ 24 ರಂದು ನಡೆಸಲಾಗುವುದು ಎಂದು ನ್ಯಾಯಲಯ ತಿಳಿಸಿದೆ.