ಬೆಂಗಳೂರು: ರಾಹುಲ್ ಗಾಂಧಿ ನೇತ್ರತ್ವದ ಭಾರತ್ ಜೋಡೋ ನ್ಯಾಯ ಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಮಣಿಪುರದ ಇಂಪಾಲ್ ವಿಮಾನ ನಿಲ್ದಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಮಿಸಿದರು. ಇವರಿಗೆ ಪಕ್ಷದ ಮುಖಂಡರು ಸ್ವಾಗತ ಕೋರಿದರು.
ಸಿಎಂ ಸಿದ್ದರಾಮಯ್ಯ ಜೊತೆಯಲ್ಲಿ ಸಚಿವರಾದ ಕೆ.ಜೆ. ಜಾರ್ಜ್, ಡಾ. ಜಿ. ಪರಮೇಶ್ವರ, ಬೈರತಿ ಸುರೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಸಾಥ್ ನೀಡಿದರು.
6700 ಕಿಮೀ, 15 ರಾಜ್ಯಗಳಲ್ಲಿ ಸಾಗಲಿದೆ ಯಾತ್ರೆ: ಇನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚಾಲನೆ ನೀಡಲಿದ್ದಾರೆ. ಕಳೆದ ವರ್ಷ ನಡೆದ ಭಾರತ್ ಜೋಡೋ ಯಾತ್ರೆಯ ಭರ್ಜರಿ ಯಶಸ್ಸಿನ ಸಂತಸದಲ್ಲಿರುವ ಕಾಂಗ್ರೆಸ್ ಪಕ್ಷ ಇದೀಗ ಮತ್ತೊಂದು ಸುತ್ತಿನ ಯಾತ್ರೆಯನ್ನು ನಡೆಸಲು ಸಜ್ಜಾಗಿದ್ದು, ಇಂದಿನಿಂದ 6713 ಕಿಲೋ ಮೀಟರ್ ನಡಿಗೆಯ ಮೂಲಕ ಭಾರತ್ ಜೋಡೋ ನ್ಯಾಯ್ ಯಾತ್ರೆ ನಡೆಯಲಿದೆ.