ಶಬರಿಮಲೆಗೆ ತೆರಳುವ ಭಕ್ತಾದಿಗಳು ಸದ್ಯ ದಕ್ಷಿಣ ಭಾರತದ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದು, ಅದೇ ರೀತಿ ಇಂದು ( ಡಿಸೆಂಬರ್ 12 ) ಬೆಳ್ಳಂಬೆಳಗ್ಗೆ ಭಕ್ತವೃಂದವೊಂದು ತಮಿಳುನಾಡಿನ ತಿರುಚನಾಪಳ್ಳಿಯ ಶ್ರೀರಂಗಂ ದೇವಸ್ಥಾನಕ್ಕೂ ಸಹ ಭೇಟಿ ನೀಡಿತ್ತು.
ಆದರೆ ಈ ಸಂದರ್ಭದಲ್ಲಿ ದೇವಸ್ಥಾನದ ಸಿಬ್ಬಂದಿ ಹಾಗೂ ಕೆಲ ಭಕ್ತರ ನಡುವೆ ಜಗಳವುಂಟಾಗಿದ್ದು ಪರಸ್ಪರ ಹೊಡೆದಾಡಿಕೊಳ್ಳುವ ಮಟ್ಟದವರೆಗೂ ತಲುಪಿದೆ. ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಜಂಟಿ ಆಯುಕ್ತ ಸೇ ಮಾರಿಯಪ್ಪನ್ ಈ ಕುರಿತು ಪ್ರತಿಕ್ರಿಯಿಸಿದ್ದು, “ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರ ಗುಂಪಿನ ಕೆಲವರು ಗಾಯತ್ರ ಮಂಟಪಲ್ಲಿದ್ದ ಹುಂಡಿಯನ್ನು ಕೈನಿಂದ ಕುಟ್ಟಿ ಶಬ್ದ ಮಾಡಿದ್ದರು. ಇದನ್ನು ಪ್ರಶ್ನಿಸಿದ ಸಿಬ್ಬಂದಿಯನ್ನೂ ಸಹ ನಿಂದಿಸಿದ್ದರು. ಅಷ್ಟೇ ಅಲ್ಲದೇ ದೇವಾಲಯದ ಒಳಗೆ ಪ್ರತಿಭಟಿಸಿದ ಈ ಗುಂಪು ದೇವಾಲಯದ ಸಿಬ್ಬಂದಿ ತಮ್ಮ ಮೇಲೆ ಹಲ್ಲೆ ನಡೆಸಿದರು ಎಂದೂ ಸಹ ಆರೋಪಿಸಲು ಆರಂಭಿಸಿದರು” ಎಂದು ಹೇಳಿಕೆ ನೀಡಿದರು.
ಆದರೆ ಭಕ್ತರ ಗುಂಪಿನಲ್ಲಿದ್ದ ಓರ್ವರು ಸಾಮಾಜಿಕ ಜಾಲತಾಣದಲ್ಲಿ ಹಲ್ಲೆಗೊಳಗಾಗಿ ರಕ್ತ ಸುರಿಯುತ್ತಿರುವ ಅಯ್ಯಪ್ಪ ಮಾಲಾಧಾರಿಯ ವಿಡಿಯೊವೊಂದನ್ನು ಹಂಚಿಕೊಂಡಿದ್ದು, ದೇವಾಲಯದ ಒಳಗೆ ʼಗೋವಿಂದ ಗೋವಿಂದʼ ಎಂಬ ಘೋಷಣೆ ಕೂಗಿದ್ದಕ್ಕೆ ಹಿಂದೂ ಧಾರ್ಮಿಕ ಹಾಗೂ ದತ್ತಿ ಇಲಾಖೆಯ ಸಿಬ್ಬಂದಿಗಳು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ, ಅಲ್ಲದೇ ಪೊಲೀಸರು ತಮ್ಮನ್ನು ಕರೆದೊಯ್ದು ದೇವಾಲಯದ ಸಿಬ್ಬಂದಿಗಳಿಗೆ ಬೆಂಬಲ ನೀಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಹೀಗೆ ಎರಡೂ ಬಣಗಳು ಒಂದೊಂದು ಕಾರಣವನ್ನು ನೀಡಿದ್ದು, ಇಬ್ಬರಲ್ಲಿ ಯಾರದ್ದು ನಿಜ ಎಂಬುದು ತಿಳಿದುಬರಬೇಕಿದೆ. ಭಕ್ತಾದಿಗಳು ಮಾಡಿರುವ ಆರೋಪದ ಕುರಿತೂ ಸಹ ಪ್ರತಿಕ್ರಿಯಿಸಿರುವ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಜಂಟಿ ಆಯುಕ್ತ ಸೇ ಮಾರಿಯಪ್ಪನ್ ನಮ್ಮ ಸಿಬ್ಬಂದಿಗಳು ಯಾರ ಮೇಲೂ ಹಲ್ಲೆ ನಡೆಸಿಲ್ಲ ಎಂದು ಹೇಳಿಕೆ ನೀಡಿದ್ದಾರೆ.