ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ರಾಮಮಂದಿರಕ್ಕೆ ಬಾಲರಾಮನ ಮೂರ್ತಿ ತಲುಪಿದ್ದು, ಜನವರಿ 22ರಂದು ಈ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ.
ಇನ್ನು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿವಿಧ ಕ್ಷೇತ್ರಗಳ ಹಲವು ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಈ ಆಮಂತ್ರಣ ಪತ್ರಿಕೆಯ ಮೇಲೆ ರಾಮಮಂದಿರದ ಲೋಗೊವನ್ನೂ ಸಹ ಮುದ್ರಿಸಲಾಗಿದೆ. ಸೂರ್ಯನ ಮಧ್ಯ ರಾಮನ ಭಾವಚಿತ್ರವಿದ್ದು, ಕೆಳಗೆ ಎರಡು ಬದಿಗಳಲ್ಲಿ ಹನುಮಂತ ನಮಸ್ಕರಿಸುತ್ತಾ ಕುಳಿತಿರುವ ಚಿತ್ರವಿದೆ. ಈ ಲೋಗೊವನ್ನು ಕಲಬುರಗಿಯ ಕಲಾವಿದ ರಮೇಶ್ ತಿಪ್ಪನೂರ್ ಎಂಬುವವರು ಡಿಸೈನ್ ಮಾಡಿದ್ದಾರೆ.
ಶ್ರೀ ರಾಮಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಲೋಗೊವನ್ನು ತಯಾರಿಸಲು ಕರೆ ನೀಡಿತ್ತು. ದೇಶದ ವಿವಿಧ ಕಲಾವಿದರು ಲೋಗೊ ತಯಾರಿಸಿ ಕಳುಹಿಸಿದ್ದರು. ಹೀಗೆ ದೇಶದ ವಿವಿಧ ಕಲಾವಿದರು ಕಳುಹಿಸಿದ ಲೋಗೊಗಳನ್ನೆಲ್ಲಾ ಪರಿಶೀಲಿಸಿದ ಟ್ರಸ್ಟ್ ಕೊನೆಗೆ ರಮೇಶ್ ತಿಪ್ಪನೂರು ಕಳುಹಿಸಿದ ಲೋಗೊವನ್ನು ಅಂತಿಮಗೊಳಿಸಿದೆ. ಅಯೋಧ್ಯೆಯ ರಾಮಲಲ್ಲಾ ಮೂರ್ತಿಯನ್ನು ತಯಾರಿಸಿದ್ದು ಕನ್ನಡಿಗ ಎಂಬ ವಿಷಯ ತಿಳಿದು ಹೆಮ್ಮೆ ಪಟ್ಟಿದ್ದ ಕನ್ನಡಿಗರು ಇದೀಗ ಲೋಗೊವನ್ನೂ ಸಹ ಕನ್ನಡಿಗನೇ ತಯಾರಿಸಿದ್ದು ಎಂಬ ವಿಷಯಕ್ಕೆ ಮತ್ತಷ್ಟು ಸಂತಸ ವ್ಯಕ್ತಪಡಿಸುತ್ತಿದ್ದಾರೆ.