ಇದೇ ವರ್ಷದ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ಅಧಿಕೃತವಾಗಿ ದಿನಾಂಕವನ್ನು ಯಾವಾಗ ಘೋಷಿಸಲಿದೆ ಎಂಬ ಪ್ರಶ್ನೆ ಎದ್ದಿತ್ತು. ಇನ್ನು ಚುನಾವಣಾ ಆಯೋಗ ಲೊಕಸಭೆ ಚುನಾವಣೆಗೆ ಸಂಬಂಧಿಸಿದ ಸುತ್ತೋಲೆಯೊಂದನ್ನು ಹೊರಡಿಸಿತ್ತು.
ಈ ಸುತ್ತೋಲೆಯಲ್ಲಿ ಲೋಕಸಭೆ ಚುನಾವಣೆ ಏಪ್ರಿಲ್ 16ರಂದು ನಡೆಯಲಿದೆ ಎಂದು ಉಲ್ಲೇಖಿಸಲಾಗಿತ್ತು. ಈ ಕುರಿತು ಹಲವು ಮಾಧ್ಯಮಗಳು ಚುನಾವಣಾ ಆಯೋಗವನ್ನು ಪ್ರಶ್ನಿಸಿದ್ದು, ಆಯೋಗ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿ ಸ್ಪಷ್ಟೀಕರಣ ನೀಡಿದೆ. ಈ ಸುತ್ತೋಲೆಯಲ್ಲಿ ಚುನಾವಣಾ ಅಧಿಕಾರಿಗಳು ತಮ್ಮ ಕರ್ತವ್ಯ ಪಾಲನೆಗೆ ಸಿದ್ಧತೆ ಮಾಡಿಕೊಳ್ಳಲು ತಾತ್ಕಾಲಿಕ ದಿನಾಂಕವನ್ನು ಪ್ರಕಟಿಸಲಾಗಿದೆ ಎಂದು ಬರೆದುಕೊಂಡಿದೆ. ಈ ಮೂಲಕ ಸುತ್ತೋಲೆಯಲ್ಲಿದ್ದ ದಿನಾಂಕ ಅಂತಿಮವಲ್ಲ ಎಂಬ ಸ್ಪಷ್ಟನೆಯನ್ನು ಚುನಾವಣಾ ಆಯೋಗ ನೀಡಿದೆ.